ನವದೆಹಲಿ: ಚೀನಾದೊಂದಿಗೆ ಲಡಾಕ್ ಗಡಿ ಸಂಘರ್ಷದ ಪ್ರಮುಖ ಘಟ್ಟದ ಸಮಯದಲ್ಲಿ ಲಡಾಕ್ ವಲಯದಲ್ಲಿ ವಾಯುಪಡೆ ಉಸ್ತುವಾರಿ ವಹಿಸಿಕೊಂಡಿದ್ದ ಯುದ್ಧ ವಿಮಾನ ಪೈಲಟ್ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ ಅವರಿಂದ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ, 42 ವರ್ಷಗಳ ಸುದೀರ್ಘ ಸೇವಾವಧಿ ನಂತರ ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ ನಿವೃತ್ತಿ ಹೊಂದುತ್ತಿದ್ದಾರೆ. ಅವರ ಅಧಿಕಾರಾವಧಿಯಲ್ಲಿ 36 ರಫೇಲ್ ಯುದ್ಧ ವಿಮಾನಗಳು ಮತ್ತು 83 ಮಾರ್ಚ್ 1 ಎ ಸ್ವದೇಶಿ ತೇಜಸ್ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು ಮುಖ್ಯವಾಗಿತ್ತು. ಭೂ ಮತ್ತು ವಾಯುಸೇನಾ ಕೇಂದ್ರಗಳಲ್ಲಿ ಹಲವು ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಅವರು ಚೀನಾದೊಂದಿಗೆ ಗಡಿ ಸಂಘರ್ಷ ಮುಂದುವರಿದಿರುವ ಮತ್ತು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಿಕ್ಕಟ್ಟು ಸಂದರ್ಭದಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.
ದೇಶದ ವಾಯುಪಡೆಗೆ ಸದ್ಯದಲ್ಲಿಯೇ ಸೇರ್ಪಡೆಯಾಗಲಿರುವ ರಷ್ಯಾದಿಂದ ಎಸ್-400 ಆಧುನಿಕ ವಾಯು ರಕ್ಷಣಾ ವ್ಯವಸ್ಥೆಗಳ ಕಾರ್ಯನಿರ್ವಹಣೆಯ ಜವಾಬ್ದಾರಿ ಕೂಡ ಹೊರಲಿದ್ದಾರೆ. ಸದ್ಯದ ಭವಿಷ್ಯದಲ್ಲಿ ಹಲವು ಸ್ವದೇಶಿ ಮತ್ತು ವಿದೇಶಿ ಮೂಲದ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿರುವುದರಿಂದ ಯುದ್ಧ ವಿಮಾನಗಳ ಆಧುನೀಕರಣಕ್ಕೆ ಕಾರಣಕರ್ತರಾಗಿರುತ್ತಾರೆ.
ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರ ಪುತ್ರ ರಫೇಲ್ ಯುದ್ಧ ವಿಮಾನ ಪೈಲಟ್ ಆಗಿದ್ದು ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನಗಳ ಸುಗಮ ಸೇರ್ಪಡೆಗೆ ಸಹಾಯ ಮಾಡಿದ್ದಾರೆ. ಪಶ್ಚಿಮ ಏರ್ ಕಮಾಂಡರ್ ಆಗಿ ಅಂಬಾಲಾ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನವನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಿದ್ದರು.
1982ರಲ್ಲಿ ಭಾರತೀಯ ವಾಯುಪಡೆಗೆ ಸೇರಿದ್ದ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಯುದ್ಧ ಹಾಗೂ ತರಬೇತಿ ವಿಮಾನದಲ್ಲಿ 3,800 ಗಂಟೆಗಳಿಗೂ ಅಧಿಕ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ.1980ರಲ್ಲಿ ಸಿಯಾಚಿನ್ ಕಣಿವೆಯಲ್ಲಿ ಆಪರೇಷನ್ ಮೇಘದೂತ, 1999ರಲ್ಲಿ ಆಪರೇಷನ್ ಸಫೇದ್ ಸಾಗರ್ ನಲ್ಲಿ ಭಾಗಿಯಾಗಿದ್ದರು.
ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜು ವೆಲ್ಲಿಂಗ್ಟನ್ ನ ವಿದ್ಯಾರ್ಥಿಯಾಗಿರುವ ಚೌಧರಿ ಮುಂಚೂಣಿಯ ಹಲವು ಫೈಟರ್ ಸ್ಕ್ವಾಡ್ರನ್ ಮತ್ತು ಫೈಟರ್ ಬೇಸ್ ನಲ್ಲಿ ಭಾಗಿಯಾಗಿದ್ದಾರೆ.