ನವದೆಹಲಿ: ಈಶಾನ್ಯ ಹಾಗೂ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಸೆ. 24ರಂದು ಒತ್ತಡ ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ಮುಂಗಾರು ಮತ್ತೆ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರಾಖಂಡ ಹಾಗೂ ಪೂರ್ವ ಉತ್ತರ ಪ್ರದೇಶದಲ್ಲಿ ಭಾನುವಾರದವರೆಗೆ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ. ಮುಂಗಾರು ತನ್ನ ಸಾಮಾನ್ಯ ಸ್ಥಾನಕ್ಕೆ ಮರಳಲಿದ್ದು, ದಕ್ಷಿಣಕ್ಕೆ ಚಲಿಸಲಿದೆ ಹಾಗೂ ಮುಂದಿನ ಐದು ದಿನಗಳಲ್ಲಿ ಇದರ ಪ್ರಭಾವ ಮುಂದುವರೆಯುತ್ತದೆ ಎಂದು ಮಾಹಿತಿ ನೀಡಿದೆ.
ಉತ್ತರ ಛತ್ತೀಸ್‌ಗಡ ಹಾಗೂ ನೆರೆಹೊರೆಯ ರಾಜ್ಯಗಳಲ್ಲಿ ಚಂಡಮಾರುತದ ಪರಿಚಲನೆಯಿದ್ದು, ಮುಂದಿನ ಮೂರು ದಿನಗಳಲ್ಲಿ ಉತ್ತರ ಮಧ್ಯ ಪ್ರದೇಶದ ಪಶ್ಚಿಮ ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪಶ್ಚಿಮ ರಾಜಸ್ಥಾನ ಮತ್ತು ನೆರೆಹೊರೆಯಲ್ಲಿ ಇನ್ನೊಂದು ಚಂಡಮಾರುತದ ಪರಿಚಲನೆ ಇರಲಿದೆ. ಈ ಹವಾಮಾನ ವೈಪರೀತ್ಯಗಳಿಂದಾಗಿ ಉತ್ತರಾಖಂಡದಲ್ಲಿ ಭಾನುವಾರದವರೆಗೆ ಹಾಗೂ ಪೂರ್ವ ಉತ್ತರ ಪ್ರದೇಶದಲ್ಲಿ ಶುಕ್ರವಾರದವರೆಗೆ ಮಳೆಯಾಗಲಿದೆ. ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಮಳೆ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹೇಳಿದೆ.
ಸೆಪ್ಟೆಂಬರ್ 26ರವರೆಗೂ ಪೂರ್ವ ರಾಜಸ್ಥಾನ ಹಾಗೂ ಗುಜರಾತ್‌ನಲ್ಲಿ ವ್ಯಾಪಕ ಮಳೆಯಾಗಲಿದೆ. ಮಧ್ಯ ಪ್ರದೇಶ, ವಿದರ್ಭಾ, ಛತ್ತೀಸ್‌ಗಡದಲ್ಲಿ ಮುಂದಿನ ಗುರುವಾರದವರೆಗೂ ಮಳೆಯಾಗುವುದಾಗಿ ತಿಳಿಸಿದೆ.
ಮ್ಯಾನ್ಮಾರ್ ಕರಾವಳಿಯಲ್ಲಿ ಹಾಗೂ ಮಾರ್ಟಬನ್ ಕೊಲ್ಲಿಗೆ ತಾಗಿಕೊಂಡಂತೆ ಚಂಡಮಾರುತದ ಪರಿಚಲನೆಯಿದೆ. ಇದು ವಾಯವ್ಯ ದಿಕ್ಕಿಗೆ ಚಲಿಸಿ ಈಶಾನ್ಯ ಹಾಗೂ ಪಕ್ಕದ ಪೂರ್ವ- ಮಧ್ಯ ಬಂಗಾಳ ಕೊಲ್ಲಿಯಲ್ಲಿ ಚಲಿಸಲಿದೆ. ಅದರ ಪ್ರಭಾವದ ಅಡಿಯಲ್ಲಿ ಶುಕ್ರವಾರ ಈ ಪ್ರದೇಶದಲ್ಲಿ ಒತ್ತಡ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮುಂದಿನ 48 ಗಂಟೆಗಳಲ್ಲಿ ಮಾರುತಗಳು ಒಡಿಶಾ ಕರಾವಳಿ ಕಡೆಗೆ, ಪಶ್ಚಿಮ ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಶನಿವಾರ ಒಡಿಶಾ ಹಾಗೂ ನೆರೆಹೊರೆ ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
ಈ ಬಾರಿ ಅಕ್ಟೋಬರ್‌ನಲ್ಲಿ ಮುಂಗಾರು ಅಂತ್ಯ ಸಾಧ್ಯತೆ;
ದೇಶದಲ್ಲಿ ಮುಂಗಾರು ಅಂತ್ಯವಾಗುವುದು ಈ ಬಾರಿ ಇನ್ನಷ್ಟು ವಿಳಂಬವಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಸೆಪ್ಟೆಂಬರ್ 26ರವರೆಗೂ ಹತ್ತು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ನೀಡಿದೆ. ಹತ್ತು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಗುಜರಾತ್‌ನಲ್ಲಿ ಮುಂದಿನ ಐದು ದಿನಗಳವರೆಗೂ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಮುಂಗಾರು ಪ್ರಭಾವದಿಂದಾಗಿ ಇನ್ನಷ್ಟು ದಿನಗಳ ಕಾಲ ಹಲವೆಡೆ ಮಳೆ ಮುಂದುವರೆಯುವುದಾಗಿ ಅಂದಾಜಿಸಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ ಹೆಚ್ಚಿನ ಮಳೆ ಮುನ್ಸೂಚನೆ:
ದೇಶದಲ್ಲಿ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ 27% ಹೆಚ್ಚಿನ ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತ ಮಳೆ ಪ್ರಮಾಣದ ಏರಿಕೆಗೆ ಕಾರಣವಾಗಲಿದೆ. ಇದರಿಂದಾಗಿ ಸಾಮಾನ್ಯವಾಗಿ ಸೆಪ್ಟೆಂಬರ್ 17ರಿಂದ ಕಡಿಮೆಯಾಗಬೇಕಿದ್ದ ಮಳೆ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈ ಬಾರಿ ಸೆಪ್ಟೆಂಬರ್ 1-20ರವರೆಗೆ ದೇಶದ ಎಲ್ಲೆಡೆಯೂ ಅಧಿಕ ಮಳೆಯಾಗಿದೆ. ಮಧ್ಯ ಭಾರತದಲ್ಲಿ ವಾಡಿಕೆಗಿಂತ 71% ಅಧಿಕ ಮಳೆಯಾಗಿದ್ದು, ನೈಋತ್ಯ ಭಾರತದಲ್ಲಿ 26% ಅಧಿಕ ಮಳೆ ದಾಖಲಾಗಿದೆ. ಈ ಅಕ್ಟೋಬರ್ ಮಧ್ಯದವರೆಗೂ ಮಳೆ ಮುಂದುವರೆಯಲಿದ್ದು, ಆನಂತರ ಮುಂಗಾರು ಅಂತ್ಯವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಬಾರಿ ಮುಂಗಾರು ಅಂತ್ಯ ವಿಳಂಬವಾಗಲಿದೆ, ಇದು ಅಸಹಜವೇನಲ್ಲ. 2019ರಲ್ಲಿ ನೈಋತ್ಯ ಮುಂಗಾರು ಅಕ್ಟೋಬರ್ 9ಕ್ಕೆ ಕೊನೆಯಾಗಿತ್ತು. 2017 ಹಾಗೂ 2018ರಲ್ಲಿಯೂ ಇದೇ ರೀತಿ ಆಗಿತ್ತು.