ಬದಿಯಡ್ಕ: ಖ್ಯಾತ ಯಕ್ಷಗಾನ ಪ್ರಸಾಧನ ಕಲಾವಿದ, ವೇಷಧಾರಿ ದಿ. ದೇವಕಾನ ಕೃಷ್ಣ ಬಟ್ಟ ಅವರ ಸಂಸ್ಮರಣಾ ಗ್ರಂಥದ ಲೋಕಾರ್ಪಣೆಯು ಪೈವಳಿಕೆಯ ಬೆನಕ ಯಕ್ಷಕಲಾ ವೇದಿಕೆಯ ನೇತೃತ್ವದಲ್ಲಿ ಶ್ರೀಮದ್ ಎಡನೀರು ಮಠದ ಆಶ್ರಯದಲ್ಲಿ ನಾಳೆ(ಭಾನುವಾರ) ಸಂಜೆ 4 ರಿಂದ ಶ್ರೀಮಠದ ಆವರಣದಲ್ಲಿ ನಡೆಯಲಿದೆ.
ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ದೇವಕಾನ ಸಂಸ್ಮರಣಾ ಗ್ರಂಥ ಲೋಕಾರ್ಪಣೆಗೊಳಿಸುವರು. ಕರ್ನಾಟಕ ಲೋಕಸೇವಾ ಆಯೋಗದ ನಿವೃತ್ತ ಅಧ್ಯಕ್ಷ ಡಾ.ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸುವರು. ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಸಂಸ್ಮರಣಾ ನುಡಿಗಳನ್ನಾಡುವರು. ಈ ಸಂದರ್ಭ ಹಿರಿಯ ಕಲಾವಿದ ಕೆ.ಗೋವಿಂದ ಭಟ್ ಹಾಗೂ ಚನಿಯಪ್ಪ ನಾಯ್ಕ ಅವರನ್ನು ಸನ್ಮಾನಿಸಲಾಗುವುದು. ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಅಭಿನಂದನಾ ಭಾಷಣ ಮಾಡುವರು. ಶ್ರೀಮದ್ ಎಡನೀರು ಮಠದ ಪ್ರಬಂಧಕ ರಾಜೇಂದ್ರ ಕಲ್ಲೂರಾಯ, ಪಾರ್ವತಿ ಅಮ್ಮ ದೇವಕಾನ ಉಪಸ್ಥಿತರಿರುವರು.
ಸಂಜೆ 6 ರಿಂದ ಹನುಮಗಿರಿ ಮೇಳದವರಿಂದ ಅಶೋಕ ಸುಂದರಿ, ಊರ್ವಶೀ ಶಾಪ, ಮಕರಾಕ್ಷ ಕಾಳಗ ಆಖ್ಯಾಯಿಕೆಯ ಯಕ್ಷಗಾನ ಪ್ರದರ್ಶನ ನಡೆಯಲಿದೆ.