ಬಾರ್ಮರ್: ರಾಜಸ್ತಾನದ ಬರ್ಮಾರ್ ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತೀಯ ವಾಯುಪಡೆಗಾಗಿ ನಿರ್ಮಿಸಲಾಗಿರುವ ತುರ್ತು ಭೂಸ್ಪರ್ಶ ನೆಲೆ(ಇಎಲ್‌ಎಫ್)ಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದರು.
ಬರ್ಮಾರ್ ನ ಗಾಂಧವ್ ಭಕಾಸರ್ ವಿಭಾಗದ ರಾಷ್ಟ್ರೀಯ ಹೆದ್ದಾರಿ ಭಾರತೀಯ ವಾಯುಪಡೆ ವಿಮಾನಗಳ ಭೂ ಸ್ಪರ್ಶಕ್ಕಾಗಿ ಬಳಸುತ್ತಿರುವ ಭಾರತದ ಮೊದಲ ರಾಷ್ಟ್ರೀಯ ಹೆದ್ದಾರಿಯಾಗಿದೆ.
ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ, ಬಿಪಿನ್ ರಾವತ್ ಅವರನ್ನು ಹೊತ್ತ ಭಾರತೀಯ ವಾಯುಪಡೆಯ ಎ ಹರ್ಕ್ಯುಲಸ್ ಸಿ-130ಜೆ ವಿಮಾನ ಗುರುವಾರ ಈ ಹೆದ್ದಾರಿಯಲ್ಲಿ ಅಣುಕು ತುರ್ತು ಭೂಸ್ಪರ್ಶ ಮಾಡಿತು.
ಸುಖೋಯ್ -30 ಎಂಕೆಐ ಫೈಟರ್‌ನಿಂದ ಆರಂಭಿಸಿ ಅನೇಕ ಲ್ಯಾಂಡಿಂಗ್ ಮತ್ತು ಟಚ್‌ಡೌನ್ ಕಾರ್ಯಾಚರಣೆಗಳನ್ನು ನಡೆಸಲಾಯಿತು. ಎಎನ್-32 ಮಿಲಿಟರಿ ಸಾರಿಗೆ ವಿಮಾನ ಮತ್ತು ಐಎಎಫ್ ನ ಎಂಐ-17v5 ಹೆಲಿಕಾಪ್ಟರ್ ಸಹ ಇಎಲ್‌ಎಫ್ ನಲ್ಲಿ ಇಳಿಯಿತು. ಇದು ಸಹಾಯಕ ಮಿಲಿಟರಿ ವಾಯುನೆಲೆಯಾಗಿ ಕಾರ್ಯನಿರ್ವಹಿಸಲು ತನ್ನ ಸಂಪೂರ್ಣ ಕಾರ್ಯಾಚರಣೆಯ ಸಿದ್ಧತೆಯನ್ನು ತೋರಿಸುತ್ತದೆ.
ಭಾರತೀಯ ವಾಯುಪಡೆಗೆ ತುರ್ತು ಭೂಸ್ಪರ್ಶದ ಸೌಲಭ್ಯಕ್ಕಾಗಿ ರಾಷ್ಟ್ರೀಯ ಹೆದ್ದಾರಿ 925ರ ಸತ್ತಾ-ಗಾಂಧವ್ ಸ್ಟ್ರೆಚ್ ನಲ್ಲಿ 3 ಕಿ.ಮೀ ರಸ್ತೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಅಭಿವೃದ್ಧಿಪಡಿಸಿದೆ.