ಹಚ್ಚಿನ ಕಂಪನ ಹೊಂದಿರುವ ವಾಹನಗಳಲ್ಲಿ ತೆರಳುವ ಸಂದರ್ಭ ಮತ್ತು ಗರಿಷ್ಠ ಸಿಸಿ ಸಾಮರ್ಥ್ಯದ ಮೋಟಾರ್‌ಬೈಕ್ ಬಳಸುವಾಗ, ಐಫೋನ್‌ನ ಕ್ಯಾಮರಾ ವಿನ್ಯಾಸಕ್ಕೆ ಧಕ್ಕೆಯಾಗಬಹುದು. ಅದರಿಂದ ಫೋಟೊ ಮತ್ತು ವಿಡಿಯೊ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಯಿದೆ ಎಂದು ಆ್ಯಪಲ್ ಹೇಳಿದೆ.
ಈ ಬಗ್ಗೆ ವಿವರಣೆ ಮತ್ತು ಸಾಧ್ಯತೆ ಕುರಿತು ಆ್ಯಪಲ್ ಗ್ರಾಹಕರಿಗೆ ಎಚ್ಚರಿಸಿದೆ. ಹೊಸ ಐಫೋನ್ ಮಾದರಿಗಳಲ್ಲಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಷನ್ ತಂತ್ರಜ್ಞಾನ ಮತ್ತು ಲೂಪ್ ಅಟೋಫೋಕಸ್ ಬಳಸಲಾಗುತ್ತದೆ. ಇದರಿಂದ ಫೋಟೊ-ವಿಡಿಯೊ ಚಿತ್ರೀಕರಿಸುವಾಗ ಕೈ ನಡುಕ ಉಂಟಾದರೂ, ಸೂಕ್ತ ಫ್ರೇಮ್ ಹೊಂದಿಸುವುದು ಸಾಧ್ಯವಾಗದಿದ್ದರೂ, ಉತ್ತಮ ಚಿತ್ರ ಮೂಡಿಬರಲು ಸಹಕಾರಿಯಾಗುತ್ತದೆ. ಆದರೆ ನಿಮ್ಮ ಐಫೋನ್ ಹೆಚ್ಚಾಗಿ ಗರಿಷ್ಠ ಕಂಪನಕ್ಕೆ ಸಿಲುಕುತ್ತಿದ್ದರೆ, ಕ್ಯಾಮರಾ ತಂತ್ರಜ್ಞಾನಕ್ಕೆ ಹಾನಿಯಾಗಬಹುದು. ಇದರಿಂದ ಫೋಟೊ-ವಿಡಿಯೊ ಮೇಲೆ ಪ್ರಭಾವ ಬೀರಬಹುದು ಎಂದು ಆ್ಯಪಲ್ ಹೇಳಿದೆ.
ಫೋಟೊ-ವಿಡಿಯೊ ಬ್ಲರ್ ಆಗುವುದು ಮತ್ತು ಶೇಕ್ ಆಗುವುದನ್ನು ತಡೆಯಲು ಆ್ಯಪಲ್ ಈ ತಂತ್ರಜ್ಞಾನ ಪರಿಚಯಿಸಿದೆ. ಆದರೆ ಐಫೋನ್, ನೇರವಾಗಿ ಹೆಚ್ಚಿನ ಕಂಪನಕ್ಕೆ ಸಿಕ್ಕಾಗ, ಈ ವಿನ್ಯಾಸಕ್ಕೆ ಧಕ್ಕೆಯಾಗಬಹುದು. ಜತೆಗೆ ಐಫೋನ್‌ಗಳನ್ನು ಹೆಚ್ಚಿನ ಅಲುಗಾಟ, ಕಂಪನ ಹೊಂದಿರುವ ಸ್ಕೂಟರ್, ಬೈಕ್, ಇತರ ಯಂತ್ರ, ವಾಹನಗಳಲ್ಲಿ ಅಳವಡಿಸಿದರೆ, ಅದರಲ್ಲೂ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂದು ಆ್ಯಪಲ್ ಸಪೋರ್ಟ್ ಹೇಳಿದೆ.
ಅಂತಹ ಅವಶ್ಯಕತೆಯಿದ್ದಲ್ಲಿ, ಕಂಪನ ತಡೆಯುವ ಸ್ಟ್ಯಾಂಡ್, ಮೌಂಟ್ ಬಳಸುವುದರಿಂದ, ಕ್ಯಾಮರಾಗೆ ಹಾನಿಯಾಗುವುದನ್ನು ತಡೆಯಬಹುದು ಎಂಬ ಸಲಹೆಯನ್ನು ಆ್ಯಪಲ್ ನೀಡಿದೆ.