ತಿರುವನಂತಪುರಂ: ದೇಶದಲ್ಲಿ ದಾಖಲಾಗುತ್ತಿರುವ ದೈನಂದಿನ ಕೊರೊನಾ ಪ್ರಕರಣಗಳಲ್ಲಿ ಕೇರಳ ರಾಜ್ಯವೊಂದರ ಪಾಲೇ ಅತಿ ಹೆಚ್ಚಿದೆ. ಇದಾಗ್ಯೂ ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆ ಕಂಡುಬಂದಿದೆ.
ಮುಂದಿನ ಎರಡು ವಾರಗಳಲ್ಲಿ ಕೇರಳದಲ್ಲಿ ಕೊರೊನಾ ಪ್ರಕರಣಗಳು ಇನ್ನಷ್ಟು ತಗ್ಗಲಿವೆ ಎಂದು ಏಮ್ಸ್ ಪ್ರೊ. ಡಾ. ಸಂಜಯ್ ರಾಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೇರಳ ಈಗಾಗಲೇ ಕೊರೊನಾ ಸೋಂಕಿನ ಉತ್ತುಂಗ ಮಟ್ಟವನ್ನು ದಾಟಿಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಕೊರೊನಾ ಪ್ರಕರಣಗಳು ಭಾರೀ ಮಟ್ಟದಲ್ಲಿ ತಗ್ಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
'ಈ ಮುನ್ನ ನಡೆಸಿದ ಸೆರೊ ಸರ್ವೇಯಲ್ಲಿ, ಕೇರಳದಲ್ಲಿ ಬಹುಪಾಲು ಜನಸಂಖ್ಯೆ ಸೋಂಕಿಗೆ ತುತ್ತಾಗುವುದನ್ನು ಸೂಚಿಸಿತ್ತು. ಈಚೆಗೆ ಸೆರೊ ಸರ್ವೇ ನಡೆಸಲಾಗಿದ್ದು, ಅದರಲ್ಲಿ, ಸುಮಾರು 46% ಮಂದಿ ಕೊರೊನಾ ಸೋಂಕಿಗೆ ತುತ್ತಾಗಿ ಅಥವಾ ಕೊರೊನಾ ಲಸಿಕೆಗಳಿಂದಾಗಿ ಸೋಂಕಿನ ವಿರುದ್ಧ ಪ್ರತಿಕಾಯಗಳನ್ನು ಹೊಂದಿದ್ದಾರೆ ಎಂಬುದನ್ನು ತಿಳಿಸಿದೆ. ರಾಜ್ಯ ತೆಗೆದುಕೊಂಡಿರುವ ಕ್ರಮಗಳು ಸೋಂಕಿನ ಹರಡುವಿಕೆಯನ್ನು ತಗ್ಗಿಸಿವೆ. ರಾಜ್ಯದಲ್ಲಿ ಸೋಂಕಿನ ಸಂಬಂಧ ಕಳೆದ 2-3 ತಿಂಗಳಿನ ದತ್ತಾಂಶವನ್ನು ಹೋಲಿಸಿದರೆ, ಸೋಂಕಿನ ಉತ್ತುಂಗವನ್ನು ದಾಟಿರುವುದು ಖಾತ್ರಿಯಾಗಿದೆ. ಮುಂದಿನ ಎರಡು ವಾರಗಳಲ್ಲಿ ಸೋಂಕಿನ ಪ್ರಮಾಣ ಭಾರೀ ಮಟ್ಟದಲ್ಲಿ ಇಳಿಕೆಯಾಗಲಿದೆ. ಈಶಾನ್ಯ ರಾಜ್ಯಗಳಂತೆಯೇ, ಅಕ್ಟೋಬರ್ ಆರಂಭದ ವೇಳೆಗೆ ಕೇರಳದಲ್ಲಿ ಕೊರೊನಾ ಸಂಪೂರ್ಣ ಇಳಿಕೆಯಾಗಲಿದೆ' ಎಂದು ರೈ ತಿಳಿಸಿದ್ದಾರೆ.
ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳನ್ನು ದಾಖಲಿಸಿದ್ದ ಕೇರಳ:
ಕಳೆದ ಒಂದು ತಿಂಗಳಿನಿಂದಲೂ ಕೇರಳದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಅತಿ ಹೆಚ್ಚಿನ ಮಟ್ಟದಲ್ಲಿ ದಾಖಲಾಗುತ್ತಿದ್ದವು. ದೇಶದ ದೈನಂದಿನ ಪ್ರಕರಣಗಳಲ್ಲಿ ಕೇರಳ ರಾಜ್ಯದ್ದು ಮುಕ್ಕಾಲು ಪಾಲಾಗಿತ್ತು. ಆಗಸ್ಟ್ ತಿಂಗಳ ಬಹುಪಾಲು ರಾಜ್ಯದಲ್ಲಿ ನಿರಂತರವಾಗಿ ದಿನನಿತ್ಯ 30 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದವು.
ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಕೊರೊನಾ ನಿಯಂತ್ರಣ ಕಠಿಣ ಸವಾಲಾಗಿತ್ತು. ಹೋಂ ಕ್ವಾರಂಟೈನ್ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣಕ್ಕೆ ಮನೆಯೊಳಗೇ ಸೋಂಕು ಹರಡುವಿಕೆ ಹೆಚ್ಚಾಗಿದೆ ಎಂದು ರಾಜ್ಯ ಆರೋಗ್ಯ ಸಚಿವರು ಮಾಹಿತಿ ನೀಡಿದ್ದರು. ರಾಜ್ಯ ಸರ್ಕಾರ ಕೊರೊನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಇವೆಲ್ಲದರ ಫಲವಾಗಿ ಕಳೆದ ಒಂದು ವಾರದಿಂದ ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ.
ಕೇರಳದಲ್ಲಿ ಕಳೆದ ಒಂದು ವಾರದಿಂದ ಕೊರೊನಾ ಪ್ರಕರಣಗಳು ಕ್ರಮೇಣ ತಗ್ಗಿದ್ದು, ದೇಶದ ಕೊರೊನಾ ಪ್ರಕರಣಗಳ ವಾರದ ಸರಾಸರಿಯಲ್ಲಿಯೂ ಇಳಿಕೆ ಕಂಡುಬಂದಿದೆ.
ಭಾನುವಾರ ಕೊನೆಗೊಂಡಂತೆ ವಾರದ ಸರಾಸರಿ ಅಂದಾಜಿನಲ್ಲಿ ಕೇರಳ ಕೊರೊನಾ ಪ್ರಕರಣಗಳಲ್ಲಿ ಶೇ 17ರಷ್ಟು ಇಳಿಕೆಯಾಗಿದ್ದು, ದೇಶದ ಒಟ್ಟಾರೆ ಕೊರೊನಾ ಪ್ರಕರಣಗಳಲ್ಲಿ ಈ ಅವಧಿಯಲ್ಲಿ ಶೇ 13ರಷ್ಟು ಇಳಿಕೆಯಾಗಿದೆ. 24 ವಾರಗಳ ನಂತರ, ಸೋಂಕಿನಿಂದ ಸಂಭವಿಸಿದ ಮರಣ ಪ್ರಮಾಣದಲ್ಲಿಯೂ ಇಳಿಕೆಯಾಗಿದೆ. ಕಳೆದ ಒಂದು ವಾರದಲ್ಲಿ, ದೇಶದಲ್ಲಿ ಸೋಂಕಿನಿಂದ 2,104 ಮಂದಿ ಸಾವನ್ನಪ್ಪಿದ್ದು, ಮಾರ್ಚ್ 22-28ರ ಅವಧಿಯ ನಂತರ ದಾಖಲಾದ ಅತಿ ಕಡಿಮೆ ಮರಣ ಪ್ರಮಾಣ ಇದಾಗಿದೆ.
ಸೆಪ್ಟೆಂಬರ್ 6-12ರವರೆಗಿನ ಅವಧಿಯಲ್ಲಿ ಕೇರಳ ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದ್ದು, ದೇಶದಲ್ಲಿಯೂ ಒಟ್ಟಾರೆ ಪ್ರಕರಣಗಳ ಸಂಖ್ಯೆ ತಗ್ಗಿದೆ. ಈ ವಾರದಲ್ಲಿ ದೇಶದಲ್ಲಿ ಕೇವಲ 2.5ಲಕ್ಷ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಮೂರು ವಾರಗಳ ನಂತರ ದಾಖಲಾದ ಕಡಿಮೆ ಪ್ರಕರಣ ಇದಾಗಿದೆ. ಅದಕ್ಕೂ ಹಿಂದಿನ ವಾರ ಈ ಸಂಖ್ಯೆ 2.8 ಲಕ್ಷ ಇತ್ತು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.