HEALTH TIPS

ಕೇರಳದಲ್ಲಿ ಕೊರೊನಾ ಏರಿಕೆ; ಕರ್ನಾಟಕ, ತಮಿಳುನಾಡಿಗೆ ಕೇಂದ್ರದ ಸೂಚನೆ

                 ನವದೆಹಲಿ: ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆಯಾಗುತ್ತಿದ್ದಂತೆ, ನೆರೆ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ಕೊರೊನಾ ಲಸಿಕೆ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲು ಕೇಂದ್ರ ಸೂಚನೆ ನೀಡಿದೆ.


             ಬುಧವಾರ ಈ ಕುರಿತು ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಕೇರಳ ನೆರೆ ರಾಜ್ಯಗಳಾದ ಕರ್ನಾಟಕ, ತಮಿಳುನಾಡಿನ ಗಡಿ ಜಿಲ್ಲೆಗಳಲ್ಲಿ ಲಸಿಕಾ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಎಂದು ತಿಳಿಸಿದ್ದಾರೆ.

           ಎರಡು ನೆರೆ ರಾಜ್ಯಗಳಲ್ಲಿ ಕೊರೊನಾ ಸೋಂಕಿನ ಅಂತರರಾಜ್ಯ ಹರಡುವಿಕೆ ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಅಗತ್ಯತೆ ಕುರಿತು ಮಾಂಡವಿಯಾ ಒತ್ತಿ ಹೇಳಿದರು.

ಕರ್ನಾಟಕ ಹಾಗೂ ತಮಿಳುನಾಡಿನ ಆರೋಗ್ಯ ಸಚಿವರೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿರುವ ಮಾಂಡವಿಯಾ, ಈ ರಾಜ್ಯಗಳ ಕೊರೊನಾ ಸ್ಥಿತಿಗತಿ ಕುರಿತು ಪರಿಶೀಲನೆ ನಡೆಸಿರುವುದಾಗಿ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ.

                ಕೇರಳದಲ್ಲಿ ಕೊರೊನಾ ಪಾಸಿಟಿವಿಟಿ ದರ ಹೆಚ್ಚಾಗಿದ್ದು, ಕೆಲವು ಜಿಲ್ಲೆಗಳಲ್ಲಿ ಶೇ 20ಕ್ಕಿಂತ ಹೆಚ್ಚಾಗಿದೆ. ಇದು ಕೊರೊನಾ ತೀವ್ರ ಹರಡುವಿಕೆಗೆ ಕಾರಣವಾಗಿದೆ ಎಂದು ಗುರುವಾರ ಸರ್ಕಾರಿ ಮೂಲಗಳು ತಿಳಿಸಿವೆ. ಕೇರಳದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವರು ಕೊರೊನಾ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ. ಪ್ರಕರಣಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಾದ ನಿಯಂತ್ರಣ ಕ್ರಮಗಳು ಹಾಗೂ ಕಾರ್ಯತಂತ್ರದ ಲಾಕ್‌ಡೌನ್ ಕುರಿತು ಪ್ರಸ್ತಾಪ ಮಾಡಲಾಗಿದೆ.

                ದೇಶದ ದಿನನಿತ್ಯ ಪ್ರಕರಣಗಳಲ್ಲಿ ಕೇರಳ ಮೂರನೇ ಒಂದು ಭಾಗದಷ್ಟು ಪ್ರಕರಣ ದಾಖಲಿಸುತ್ತಿದೆ. ಆದರೆ ಕಂಟೈನ್ಮೆಂಟ್ ಲಾಕ್‌ಡೌನ್‌ ಕಾರ್ಯತಂತ್ರದಂಥ ನಿಯಂತ್ರಣ ಕ್ರಮಗಳನ್ನು ಹೇರಲು ರಾಜ್ಯ ಸರ್ಕಾರ ಹಿಂಜರಿಯುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕೇರಳದಲ್ಲಿ ಸುಮಾರು 85% ಕೊರೊನಾ ಸೋಂಕಿತರು ಹೋಂ ಕ್ವಾರಂಟೈನ್‌ನಲ್ಲಿದ್ದು, ರಾಜ್ಯ ಸರ್ಕಾರ ದಿನನಿತ್ಯದ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ವಿಧಿಸಬೇಕಾಗಿದೆ. ಸ್ಮಾರ್ಟ್ ಕಾರ್ಯತಂತ್ರದ ಲಾಕ್‌ಡೌನ್ ಜಾರಿಗೊಳಿಸುವ ಯೋಜನೆಯನ್ನು ರಾಜ್ಯ ಅನುಸರಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಒತ್ತಿಹೇಳಿದೆ.

           ಕೇರಳದಲ್ಲಿ ಕೆಲವು ದಿನಗಳಿಂದ ಕೊರೊನಾ ಪ್ರಕರಣಗಳ ಸಂಖ್ಯೆ ನಿರಂತರ ಏರಿಕೆಯಾಗುತ್ತಿದೆ. ದೇಶದಲ್ಲೇ ಅತಿ ಹೆಚ್ಚು ಕೊರೊನಾ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯ ಕೇರಳ ಆಗಿದೆ. ಕೊರೊನಾ ಪ್ರಕರಣಗಳ ಆತಂಕಕಾರಿ ಏರಿಕೆ ನಡುವೆ ರಾಜ್ಯ ಕೇಂದ್ರ ಸರ್ಕಾರದ ಸಲಹೆಯನ್ನು ಅನುಸರಿಸಿಲ್ಲ. ನೆರೆ ರಾಜ್ಯಗಳು ಕೂಡ ಇದರ ಪರಿಣಾಮ ಅನುಭವಿಸುತ್ತಿವೆ ಎಂದು ಕೇಂದ್ರ ಉಲ್ಲೇಖಿಸಿತ್ತು.

ಹೋಂ ಕ್ವಾರಂಟೈನ್‌ನಲ್ಲಿದ್ದು, ಚೇತರಿಸಿಕೊಳ್ಳುತ್ತಿರುವ ರೋಗಿಗಳು ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಇದು ವೈರಸ್ ಹರಡುವಿಕೆಯನ್ನು ತಡೆಯಲು ರಾಜ್ಯದ ವಿಫಲತೆಗೆ ಪ್ರಮುಖ ಕಾರಣವಾಗಿದೆ ಎಂದು ಹೇಳಿತ್ತು. ಕಂಟೈನ್ಮೆಂಟ್ ವಲಯಗಳಲ್ಲಿ ಕಠಿಣ ಕ್ರಮಗಳು ಹಾಗೂ ಪ್ರಯಾಣಕ್ಕೆ ತಡೆಹಿಡಿಯುವುದು ರಾಜ್ಯ ತುರ್ತಾಗಿ ಗಮನ ಹರಿಸಬೇಕಾಗಿರುವ ಕೆಲವು ಅಂಶಗಳಾಗಿವೆ ಎಂದು ಸಲಹೆ ನೀಡಿತ್ತು.

                 ಕೇರಳದಿಂದ ಬರುವವರಿಗೆ ರಾಜ್ಯದಲ್ಲಿ ಕ್ವಾರಂಟೈನ್ ಕಡ್ಡಾಯ: ವಿದ್ಯಾರ್ಥಿಗಳ ಹೊರತಾಗಿ ಕೇರಳದಿಂದ ಆಗಮಿಸುವ ಪ್ರತಿಯೊಬ್ಬರಿಗೂ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ RT-PCR ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಕರ್ನಾಟಕದಲ್ಲಿ ಉದ್ಯೋಗ ಮಾಡುತ್ತಿರುವ ಕೇರಳ ಉದ್ಯೋಗಿಗಳಿಗೂ ಅಥವಾ ಇತ್ತೀಚಿಗೆ ಕೇರಳಕ್ಕೆ ಭೇಟಿ ನೀಡಿ ರಾಜ್ಯಕ್ಕೆ ವಾಪಸ್ಸಾದ ಪ್ರತಿಯೊಬ್ಬರಿಗೂ ಸಾಂಸ್ಥಿಕ ಕ್ವಾರಂಟೈನ್ ಕ್ರಮ ಕಡ್ಡಾಯವಾಗಿದೆ.

             ಎರಡನೇ ಅಲೆ ಭೀಕರತೆ ತಗ್ಗುತ್ತಿದ್ದಂತೆ ಹಲವು ರಾಜ್ಯಗಳಲ್ಲಿ ಕೊರೊನಾ ಪ್ರಕರಣಗಳು ಕ್ರಮೇಣ ಇಳಿಕೆಯಾದರೂ ಕೇರಳದಲ್ಲಿ ಮಾತ್ರ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ಕೊರೊನಾ ಮೂರನೇ ಅಲೆ ಸಾಧ್ಯತೆ ಕುರಿತ ಎಚ್ಚರಿಕೆ ನಡುವೆ ಕೇರಳದಲ್ಲಿ ಪ್ರಕರಣಗಳು ನಿಯಂತ್ರಣಕ್ಕೆ ಬರದೇ ಇರುವುದು ಭೀತಿಗೆ ಕಾರಣವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries