ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ಗೆ ಸೋಮವಾರ ಚಾಲನೆ ನೀಡಿದ್ದಾರೆ.
ದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಮಾರಾಂಭದಲ್ಲಿ ಆಯುಷ್ಮಾನ್ ಭಾರತ್ ಯೋಜನೆಯ ಹೊಸ ಹಂತಕ್ಕೆ ಚಾಲನೆ ನೀಡಿದರು.
ಬಳಿಕ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 21 ನೇ ಶತಮಾನದಲ್ಲಿ ಭಾರತವು ಮುಂದುವರೆಯಲು ಇಂದು ಅತ್ಯಂತ ಮಹತ್ವದ ದಿನ. ಕಳೆದ 7 ವರ್ಷಗಳ ಹಿಂದೆ ಆರಂಭಿಸಿದ ಆರೋಗ್ಯ ಅಭಿಯಾನಕ್ಕೆ ಇಂದು ಹೊಸ ಟಚ್ ಸಿಕ್ಕಿದೆ. ಭಾರತ್ ಡಿಜಿಟಲ್ ಮಿಷನ್ ಇಂದಿನಿಂದ ಕಾರ್ಯಾರಂಭ ಆಗುತ್ತಿದೆ. ಇದು ಭಾರತೀಯರ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಿ ಶಕ್ತಿಯನ್ನು ತುಂಬಲಿದೆ ಎಂದು ಅಭಿಪ್ರಾಯಪಟ್ಟರು.
ಈ ಯೋಜನೆಯಡಿ ಪ್ರತಿಯೊಬ್ಬ ಭಾರತೀಯನಿಗೂ ಡಿಜಿಟಲ್ ಆರೋಗ್ಯ ಐಡಿ ನೀಡಲಾಗುವುದು ಎಂದು ಅವರು ಹೇಳಿದರು. ಪ್ರತಿಯೊಬ್ಬ ನಾಗರಿಕನ ಆರೋಗ್ಯ ದಾಖಲೆ ಡಿಜಿಟಲ್ ವ್ಯವಸ್ಥೆಯಡಿ ಸುರಕ್ಷಿತವಾಗಿರಲಿದೆ ಎಂದು ಅವರು ಭರವಸೆ ನೀಡಿದರು.
ಈ ಮಿಷನ್ ದೇಶದ ಬಡ ಮತ್ತು ಮಧ್ಯಮ ವರ್ಗದವರಿಗೆ ಅನುಕೂಲ ಆಗಲಿದೆ. ಬಡವರು ಚಿಕಿತ್ಸೆ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳನ್ನು ತೆಗೆದುಹಾಕುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. 3 ವರ್ಷಗಳ ಹಿಂದೆ ಪಂಡಿತ್ ದೀನದಯಾಳ್ ಉಪಾಧ್ಯಾಯರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಆಯುಷ್ಮಾನ್ ಯೋಜನೆಯನ್ನ ಆರಂಭಿಸಲಾಯಿತು. ಇಂದಿನಿಂದ ದೇಶಾದ್ಯಂತ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಶುರುವಾಗುತ್ತಿದ್ದು, ನನಗೆ ಸಂತೋಷವಾಗಿದೆ ಎಂದು ಹೇಳಿದರು.
ಕಳೆದ ಮೂರು ವರ್ಷಗಳಲ್ಲಿ ಆಯುಷ್ಮಾನ್ ಯೋಜನೆ ದೇಶದ ಸಾವಿರಾರು ಬಡ ಕುಟುಂಬಗಳ ಕೈಹಿಡಿದಿದೆ. ಇದೀಗ ಇಂತಹ ಕುಟುಂಬಗಳ ರಕ್ಷಣೆಗೆ ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಆರಂಭವಾಗಿದೆ. ಇದರ ಅಡಿಯಲ್ಲಿ ಡಿಜಿಟಲ್ ಆರೋಗ್ಯ ಐಡಿಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ನಾಗರಿಕನ ಆರೋಗ್ಯ ದಾಖಲೆಯನ್ನು ಡಿಜಿಟಲ್ ಮೂಲಕ ರಕ್ಷಿಸಲಾಗುತ್ತದೆ ಅಂತಾ ತಿಳಿಸಿದರು.
ಆರೋಗ್ಯ ಸೇತು ಆಯಪ್ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಸಾಕಷ್ಟು ಸಹಾಯ ಮಾಡಿದೆ. ಉಚಿತ ಲಸಿಕೆ ಅಭಿಯಾನದ ಅಡಿಯಲ್ಲಿ ಭಾರತವು ಇಂದು ಸುಮಾರು 90 ಕೋಟಿ ಡೋಸ್ ವ್ಯಾಕ್ಸಿನೇಷನ್ ಪೂರೈಸಿದೆ. ಇದರ ಹಿಂದೆ ಕೋ-ವಿನ್ ಆಯಪ್ನ ಪಾತ್ರ ಕೂಡ ದೊಡ್ಡದಿದೆ. ಕೊರೊನಾ ಅವಧಿಯಲ್ಲಿ ಟೆಲಿಮೆಡಿಸಿನ್‌ನ ವಿಸ್ತರಣೆಯೂ ಆಗಿದೆ. ಈ ಸೌಲಭ್ಯವು ರಿಮೋಟ್ ಸ್ಥಳಗಳಲ್ಲಿ ವಾಸವಾಗಿರುವ ದೇಶವಾಸಿಗಳು ನಗರದ ದೊಡ್ಡ ಆಸ್ಪತ್ರೆಗಳ ವೈದ್ಯರೊಂದಿಗೆ ಮನೆಯಲ್ಲಿಯೇ ಕುಳಿತು ಸಂಪರ್ಕಿಸಲು ಸಹಾಯ ಆಗಿದೆ ಎಂದರು.