ಕಾಸರಗೋಡು: ಭಯೋತ್ಪಾದನಾ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇರಳದ ಕರಾವಳಿಯಾದ್ಯಂತ ಕರಾವಳಿ ಪೊಲೀಸ್ ಹಾಗೂ ಕೇಂದ್ರ ಏಜನ್ಸಿಗಳು ಜಂಟಿ ಜಾಗ್ರತಾ ಕಾರ್ಯಾಚರಣೆ ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದ ಜನವಾಸವಿಲ್ಲದ ಸರ್ಕಾರಿ ಯಾ ಖಾಸಗಿ ಕಟ್ಟಡಗಳ ತಪಾಸಣೆ ನಡೆಸಲಾಗುತ್ತಿದೆ.
ಉಪಯೋಗಶೂನ್ಯವಾಗಿರುವ ಹಳೇ ಕಟ್ಟಡಗಳನ್ನು ಒಡೆದು ತೆಗೆಯುವ ಕಾರ್ಯಕ್ಕೂ ಚಾಲನೆ ನೀಡಲಾಗಿದ್ದು, ಖಾಸಗಿ ಮಾಲಿಕತ್ವದ ಕಟ್ಟಡಗಳ ಮಾಹಿತಿ ಸಂಗ್ರಹವೂ ನಡೆಯುತ್ತಿದೆ. ಕರಾವಳಿಯಲ್ಲಿ ದೀರ್ಘ ಕಾಲದಿಂದವಾಸಿಸುತ್ತಿರುವ ಅನ್ಯ ರಾಜ್ಯದ ನಿವಾಸಿಗಳ ಬಗ್ಗೆಯೂ ನಿಗಾ ಇರಿಸಲಾಗುತ್ತಿದ್ದು, ವಾಸ್ತವ್ಯ, ಪ್ರಯಾಣದ ಸೂಕ್ತ ದಾಖಲೆ ಹೊಂದಿರದವರ ಮಾಹಿತಿಯನ್ನೂ ಐ.ಬಿಗೆ ನೀಡಲಾಗುತ್ತಿದೆ.
ಕರಾವಳಿ ಪೊಲೀಸ್ ನೇತೃತ್ವದಲ್ಲಿ ಬೀಟ್ ವ್ಯವಸ್ಥೆಯನ್ನೂ ಜಾರಿಗೆ ತರಲಾಗಿದೆ. ಕರಾವಳಿಯ ಹೋಟೆಲ್, ವಸತಿಗೃಹಗಳಿಗೆ ಅಪರಿಚಿತರು ಆಗಮಿಸಿದಲ್ಲಿ ತಕ್ಷಣ ಮಾಹಿತಿ ನೀಡುವಂತೆಯೂ ಸೂಚಿಸಲಾಗಿದೆ. ಸಮುದ್ರದಲ್ಲಿ ಅಪರಿಚಿತ ಬೋಟ್‍ಗಳು ಕಂಡುಬಂದಲ್ಲಿ ಮೀನುಗಾರಿಕಾ ಇಲಾಖೆಗೆ ಮಾಹಿತಿ ನೀಡುವಂತೆ ಮೀನುಗಾರರಿಗೆ ನಿರ್ದೇಶ ನೀಡಲಾಗಿದೆ.ಲೀ ಬಗ್ಗೆ ಮೀನುಗಾರರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಇತ್ತೀಚೆಗೆ ಪರವಾನಗಿಯಿಲ್ಲದೆ ಕೇರಳದ ಕರಾವಳಿ ಪ್ರವೇಶಿಸಿದ 35 ದೋಣಿಗಳನ್ನು ವಶಪಡಿಸಿ ಮೀನುಗಾರಿಕಾ ಇಲಾಖೆಗೆ ಹಸ್ತಾಂತರಿಸಲಾಗಿದೆ.