ನವದೆಹಲಿ: ಅಫ್ಗಾನಿಸ್ತಾನದ ಕೆಡೆಟ್‌ಗಳಿಗೆ ಅವರ ಕೋರ್ಸ್‌ಗಳು ಮುಗಿಯುವವರೆಗೂ ತರಬೇತಿ ಮುಂದುವರಿಸುವ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಡೆಹ್ರಾಡೂನ್‌ನಲ್ಲಿರುವ ಅಕಾಡೆಮಿ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿರುವ ರಕ್ಷಣಾ ಪಡೆಯ ಅಕಾಡೆಮಿಗಳಲ್ಲಿ ಅಫ್ಗಾನ್‌ನ 130 ಸೈನಿಕರು ತರಬೇತಿ ಪಡೆಯುತ್ತಿದ್ದಾರೆ.
ʼಕೆಡೆಟ್‌ಗಳು ಅವರ ಕೋರ್ಸ್‌ಗಳು ಮುಗಿಯುವವರೆಗೆ ತರಬೇತಿ ಪಡೆಯುವ ಅವಕಾಶ ಕಲ್ಪಿಸಲು ನಿರ್ಧರಿಸಿದ್ದೇವೆ. ಅದಾದ ಬಳಿಕ ಅಫ್ಗಾನ್ ರಾಯಭಾರ ಕಚೇರಿಯ ಅಧಿಕಾರಿಗಳು ಕೆಡೆಟ್‌ಗಳ ಭವಿಷ್ಯದ ಬಗ್ಗೆ ನಿರ್ಧರಿಸಲಿದ್ದಾರೆʼ ಎಂದು ಸೇನಾ ಮೂಲಗಳು ತಿಳಿಸಿವೆ.
ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ ಭಾಗವಾಗಿ, ಭಾರತದ ರಕ್ಷಣಾ ಪಡೆಗಳು ಅಫ್ಗಾನ್ ಕೆಡೆಟ್‌ಗಳು ಮತ್ತು ಸೈನಿಕರಿಗೆ ವಿವಿಧ ಮಿಲಿಟರಿ ಕೇಂದ್ರಗಳಲ್ಲಿ ದಶಕದಿಂದಲೂ ಕೌಶಲ್ಯ ವೃದ್ಧಿ ತರಬೇತಿ ನೀಡುತ್ತಿವೆ. ಅಷ್ಟಲ್ಲದೇ ಅಫ್ಗಾನಿಸ್ತಾನದ ರಾಷ್ಟ್ರೀಯ ಸೇನೆಯ ಸಾವಿರಾರು ಸೈನಿಕರು ಭಾರತದಲ್ಲಿ ತರಬೇತಿ ಪಡೆದಿದ್ದಾರೆ.
ಅಫ್ಗಾನ್‌ನ ಅತಿಹೆಚ್ಚು (80) ಕೆಡೆಟ್‌ಗಳು ಡೆಹ್ರಾಡೂನ್‌ನಲ್ಲಿರುವ ಅಕಾಡೆಮಿಯಲ್ಲಿ ಇದ್ದಾರೆ. ಉಳಿದ 50 ಮಂದಿ ಚೆನ್ನೈ ಮತ್ತು ಖಡಕ್ವಾಸ್ಲಾದಲ್ಲಿರುವ ಅಕಾಡೆಮಿಗಳಲ್ಲಿದ್ದಾರೆ.
ಅಮೆರಿಕದೊಂದಿಗಿನ ಮೈತ್ರಿಯ ಅಡಿಯಲ್ಲಿ ತಾಲಿಬಾನ್ ವಿರುದ್ಧ ಹೋರಾಟ ನಡೆಸಲು ಅಫ್ಗಾನ್ ಸೈನಿಕರಿಗೆ ವಿವಿಧ ಅಕಾಡೆಮಿಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಅಫ್ಗಾನ್‌ನಲ್ಲಿ ಭಯೋತ್ಪಾದನೆಯನ್ನು ಕೊನೆಗಾಣಿಸಲು ಪಣತೊಟ್ಟು ಕಳೆದ 20 ವರ್ಷಗಳಿಂದಲೂ ಆ ದೇಶದಲ್ಲಿ ಬೀಡುಬಿಟ್ಟಿದ್ದ ಅಮೆರಿಕದ ಸೇನೆ ಇದೀಗ ವಾಪಸ್ ಆಗಿದೆ. ಇದರ ಬೆನ್ನಲ್ಲೇ ಆಕ್ರಮಣ ಆರಂಭಿಸಿದ್ದ ತಾಲಿಬಾನ್ ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆದಿದೆ. ಅಮೆರಿಕ ಸೇನೆಯ ಶಸ್ತ್ರಾಸ್ತ್ರಗಳು, ವಾಹನಗಳು ತಾಲಿಬಾನಿಗಳ ವಶವಾಗಿವೆ.
ಅಫ್ಗಾನ್ ಅಧಿಕಾರ ತಾಲಿಬಾನ್ ವಶವಾದ ಬಳಿಕ ಹಲವು ಅಧಿಕಾರಿಗಳು ತಾಲಿಬಾನ್ ಸೇನೆಗೆ ಸೇರಿದ್ದಾರೆ. ಅದರಂತೆ, ಭಾರತದಲ್ಲಿ ತರಬೇತಿ ನಿರತ ಸೈನಿಕರಿಗೂ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ, ಅದು ಖಚಿತವಾಗಿಲ್ಲ.