ಲಖನೌ: ಅಖಿಲ ಭಾರತೀಯ ಅಖಾಡ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೂವರು ಶಿಷ್ಯಂದಿರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಆನಂದಗಿರಿ, ಆದ್ಯ ತಿವಾರಿ ಮತ್ತು ಸಂದೀಪ್ ತಿವಾರಿ ಎಂದು ಗುರುತಿಸಲಾಗಿದೆ. ಆನಂದಗಿರಿಯನ್ನು ಹರಿದ್ವಾರದಲ್ಲಿ ಹಾಗೂ ಇನ್ನಿಬ್ಬರನ್ನು ಪ್ರಯಾಗ್‌ರಾಜ್‌ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮೂವರ ವಿರುದ್ಧ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿತರ ವಿರುದ್ಧಆ ತ್ಮಹತ್ಯೆಗೆ ಪ್ರಚೋದನೆ ನೀಡಿರುವ ಆರೋಪದ ಅಡಿ (ಐಪಿಸಿ ಸೆಕ್ಷನ್ 306ರ ಪ್ರಕಾರ) ಪ್ರಕರಣ ದಾಖಲಿಸಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪಟ್ಟಣದಲ್ಲಿ ಬಘಾಂಬರಿ ಮಠದಲ್ಲಿನ ಕೊಠಡಿಯೊಳಗೆ ನೇಣುಬಿಗಿದ ಸ್ಥಿತಿಯಲ್ಲಿ ನರೇಂದ್ರ ಗಿರಿ ಅವರ ದೇಹ ಪತ್ತೆಯಾಗಿತ್ತು. ಪೊಲೀಸ್ ಮೂಲಗಳ ಪ್ರಕಾರ ಗಿರಿ ಅವರ ಕೊಠಡಿಯಲ್ಲಿ ಎಂಟು ಪುಟಗಳ ಆತ್ಮಹತ್ಯಾ ಪತ್ರ ಪತ್ತೆಯಾಗಿದೆ.
ಈ ಪತ್ರದಲ್ಲಿ ಮಹಾಂತ ಅವರು 'ನನ್ನ ಮೂವರು ಶಿಷ್ಯಂದಿರು ನನಗೆ ಕಿರುಕುಳ ನೀಡುತ್ತಿದ್ದರು. ನಾನು ತುಂಬಾ ಘನತೆ ಮತ್ತು ಗೌರವದಿಂದ ಜೀವನ ನಡೆಸುತ್ತಿದ್ದೆ. ಆದರೆ, ಇತ್ತೀಚೆಗೆ ಶಿಷ್ಯಂದಿರ ಕಿರುಕುಳದಿಂದಾಗಿ ಅವಮಾನ ಅನುಭವಿಸಿ ಬದುಕುವಂತಾಯಿತು' ಎಂದು ಬರೆದಿರುವುದಾಗಿ ಪ್ರಯಾಗ್‌ರಾಜ್‌ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಪತ್ರದಲ್ಲಿ ತಮಗೆ ಕಿರುಕುಳ ನೀಡಿದ ಮೂವರು ಶಿಷ್ಯಂದಿರ ಹೆಸರನ್ನು ಬರೆದಿರುವುದಾಗಿ ಮೂಲಗಳು ತಿಳಿಸಿವೆ. ಈ ಪತ್ರದ ಆಧಾರದ ಮೇಲೆ ಪೊಲೀಸರು ಶಿಷ್ಯಂದಿರನ್ನು ಬಂಧಿಸಿದ್ದಾರೆ.
ಮಠಕ್ಕೆ ಸಂಬಂಧಿಸಿದ ವಿಚಾರದಲ್ಲಿ ಆನಂದಗಿರಿಯೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಮಹಾಂತ ನರೇಂದ್ರ ಗಿರಿ, ಇತ್ತೀಚೆಗೆ ಆನಂದಗಿರಿಯನ್ನು ಬಘಾಂಬರಿ ಮಠದಿಂದ ಹೊರ ಹಾಕಿದ್ದರು. ನಂತರ ಆನಂದಗಿರಿ ಅಖಾಡ ಪರಿಷದ್ ಅಧ್ಯಕ್ಷರ ಬಳಿ ಕ್ಷಮೆಯಾಚಿಸಿದ ನಂತರ, ಈ ವಿವಾದ ಇತ್ಯರ್ಥಗೊಂಡಿತ್ತು ಎಂದು ಮೂಲಗಳು ತಿಳಿಸಿವೆ.
ಮಹಾಂತ ನರೇಂದ್ರ ಗಿರಿ ಅವರು, ಮಠದ ಹಿರಿಯರು ಮತ್ತು ರಾಜಕಾರಣಿಗಳೊಂದಿಗೆ ಸಾಕಷ್ಟು ಒಡನಾಟ, ಪ್ರಭಾವವನ್ನು ಹೊಂದಿದ್ದರು. ಸಚಿವರು, ವಿಶೇಷವಾಗಿ ಬಿಜೆಪಿ ನಾಯಕರು ನರೇಂದ್ರ ಗಿರಿಯವರನ್ನು ಭೇಟಿ ಮಾಡಲು ಮತ್ತು ಅವರ ಆಶೀರ್ವಾದ ಪಡೆಯಲು ಮಠದ ಎದುರು ಸಾಲುಗಟ್ಟಿ ನಿಲ್ಲುತ್ತಿದ್ದರು ಎಂದು ಮೂಲಗಳು ತಿಳಿಸಿವೆ.