ವಾಷಿಂಗ್ಟನ್ : ಕೊರೊನಾ ವೈರಸ್ ಸೋಂಕು ವಿರುದ್ದ ಸಂಪೂರ್ಣ ಲಸಿಕೆಯನ್ನು ಪಡೆದವರಿಗೆ ಎಲ್ಲಾ ವಿಮಾನ ಪ್ರಯಾಣಿಕರಿಗೆ ನಿರ್ಬಂಧವನ್ನು ನವೆಂಬರ್ ತಿಂಗಳಿನಿಂದ ಸಡಿಲಿಕೆ ಮಾಡಲಾಗುವುದು ಎಂದು ಸೋಮವಾರ ಅಮೆರಿಕ ಘೋಷಣೆ ಮಾಡಿದೆ. ಪರೀಕ್ಷೆ ಮತ್ತು ಸಂಪರ್ಕ ಪತ್ತೆಹಚ್ಚುವಿಕೆಗೆಯ ಮೂಲಕ ಸಂಪೂರ್ಣ ಲಸಿಕೆ ಪಡೆದ ಜನರಿಗೆ ಅಮೆರಿಕ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಅಮೆರಿಕ ಸ್ಪಷ್ಟಪಡಿಸಿದೆ.
ಯುಎಸ್ ಅಧ್ಯಕ್ಷ ಜೋ ಬೈಡೆನ್‌ರ ಕೊರೊನಾವೈರಸ್ ಬಗೆಗಿನ ವಿಚಾರಗಳ ನಿರ್ವಾಹಕ ಜೆಫ್ರಿ ಜಿಯೆಂಟ್ಸ್ ವರದಿಗಾರರಿಗೆ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. "ಈ ಹೊಸ ಮಾರ್ಗಸೂಚಿಯು ನವೆಂಬರ್‌ನಿಂದ ಜಾರಿಗೆ ಬರಲಿದೆ," ಎಂದು ತಿಳಿಸಿದ್ದಾರೆ. ಕೊರೊನಾ ವೈರಸ್ ಸೋಂಕು ಕಾರಣದಿಂದಾಗಿ ಕಳೆದ 18 ತಿಂಗಳುಗಳ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಹೇರಿದ್ದ ಕೋವಿಡ್ ಪ್ರಯಾಣ ನಿರ್ಬಂಧವನ್ನು ಈ ಮೂಲಕ ಸಡಿಲಿಕೆ ಮಾಡಲಾಗುತ್ತದೆ. ಇದು ಕೋವಿಡ್ ನಿರ್ಬಂಧಗಳ ವಿಚಾರದಲ್ಲಿ ಜೋ ಬೈಡೆನ್ ಕೈಗೊಂಡ ಮಹತ್ವದ ನಿರ್ಧಾರವಾಗಿದೆ. ರಾಜತಾಂತ್ರಿಕ ಸಂಬಂಧಗಳ ಬಿಕ್ಕಟ್ಟಿನ ಹಿನ್ನೆಲೆ ಯುರೋಪಿಯನ್ ಮಿತ್ರರಾಷ್ಟ್ರಗಳು ಮುಂದಿಟ್ಟಿದ ನಿಯಮ ಸಡಿಲಿಕೆ ಬೇಡಿಕೆಗೆ ಈ ಮೂಲಕ ಜೋ ಬೈಡೆನ್ ಉತ್ತರ ನೀಡಿದ್ದಾರೆ.
ಅಮೆರಿಕದಲ್ಲಿ ಸುಮಾರು 670,000 ಜನರನ್ನು ಬಲಿ ಪಡೆದ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಉಳಿದ ನಿರ್ಬಂಧಗಳು ಹಾಗೆಯೇ ಇರಲಿದೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಯುಎಸ್ ಅಧ್ಯಕ್ಷ ಜೋ ಬೈಡೆನ್‌ರ ಕೊರೊನಾವೈರಸ್ ಬಗೆಗಿನ ವಿಚಾರಗಳ ನಿರ್ವಾಹಕ ಜೆಫ್ರಿ ಜಿಯೆಂಟ್ಸ್, "ನಿರ್ಬಂಧವನ್ನು ಕೊಂಚ ಸಡಿಲಿಕೆ ಮಾಡಲಾಗುತ್ತಿದ್ದರೂ ಕೊರೊನಾ ವೈರಸ್ ಸೋಂಕಿನ ವಿರುದ್ದ ಸಂಪೂರ್ಣ ಲಸಿಕೆಯನ್ನು ಪಡೆದ ವಿದೇಶಿಯರಿಗೆ ಮಾತ್ರ ಅಮೆರಿಕೆ ಪ್ರವೇಶ ಎಂಬುವುದು ಬಹು ಮುಖ್ಯ ವಿಚಾರ," ಎಂದು ತಿಳಿಸಿದ್ದಾರೆ.
ಆದರೆ ಯುಎಸ್ ಪ್ರಮಾಣಿತ ಕೋವಿಡ್ ಲಸಿಕೆಗಳನ್ನು ಪಡೆದರೆ ಮಾತ್ರ ಅಮೆರಿಕ ಪ್ರವೇಶ ದೊರೆಯಲಿದೆಯೇ ಅಥವಾ ಕೋವಿಡ್ ವಿರುದ್ದ ಯಾವುದೇ ಲಸಿಕೆಯನ್ನು ಪಡೆದವರಿಗೆ ಅಮೆರಿಕ ಪ್ರವೇಶಕ್ಕೆ ಅವಕಾಶ ದೊರೆಯಲಿದೆಯೇ ಎಂಬುವುದರ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಜೆಫ್ರಿ ಜಿಯೆಂಟ್ಸ್ ನೀಡಿಲ್ಲ. "ಈ ಬಗ್ಗೆ ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ನಿರ್ಧಾರ ಕೈಗೊಳ್ಳುತ್ತದೆ," ಎಂದಷ್ಟೇ ಜೆಫ್ರಿ ಜಿಯೆಂಟ್ಸ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಕೆನಡಾ ಹಾಗೂ ಮೆಕ್ಸಿಕೋದಿಂದ ಬರುವ ಹಾಗೂ ಹೋಗುವ ವಾಹನಗಳ ಮೇಲಿನ ನಿರ್ಬಂಧವು ಹಾಗೆಯೇ ಇರಲಿದೆ. "ಭೂಮಿಯ ಗಡಿ ನೀತಿಯ ವಿಚಾರದಲ್ಲಿ ನಮಗೆ ಯಾವುದೇ ಮಾಹಿತಿ ಇಲ್ಲ," ಎಂದು ಜೆಫ್ರಿ ಜಿಯೆಂಟ್ಸ್ ತಿಳಿಸಿದ್ದಾರೆ. "ವಿದೇಶದಿಂದ ಬರುವ ಪ್ರಯಾಣಿಕರು ತಾವು ಕೋವಿಡ್ ವಿರುದ್ದ ಸಂಪೂರ್ಣ ಲಸಿಕೆಯನ್ನು ಪಡೆದ ಪ್ರಮಾಣ ಪತ್ರವನ್ನು ಮೊದಲು ತೋರಿಸಬೇಕು. ಹಾಗೆಯೇ ಕೊರೊನಾ ವೈರಸ್ ಸೋಂಕು ಪರೀಕ್ಷೆಗೆ ಒಳಪಟ್ಟು ನೆಗೆಟಿವ್ ವರದಿಯನ್ನು ತಮ್ಮ ಬಳಿ ಹೊಂದಿರಬೇಕು. ಈ ನೆಗೆಟಿವ್ ವರದಿಯು ಮೂರು ದಿನಗಳಿಗೆ ಒಳಪಟ್ಟಿದ್ದು ಆಗಿರಬೇಕು," ಎಂದು ಜೆಫ್ರಿ ಜಿಯೆಂಟ್ಸ್ ವಿವರಿಸಿದ್ದಾರೆ.
ಈ ನಡುವೆ ಕೊರೊನಾ ವೈರಸ್ ಸೋಂಕಿನ ವಿರುದ್ದ ಸಂಪೂರ್ಣವಾಗಿ ಲಸಿಕೆಯನ್ನು ಪಡೆಯದ ಅಮೆರಿಕನ್ನರಿಗೆ ಅಮೆರಿಕ ಪ್ರವೇಶ ಮಾಡಲು ಅವಕಾಶ ನೀಡಲಾಗಿದೆ. ಆದರೆ ಕೋವಿಡ್ ಪರೀಕ್ಷೆಗೆ ಒಳಪಟ್ಟು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಹಾಗೆಯೇ ವಿಮಾನದಲ್ಲಿ ಮಾಸ್ಕ್ ಹಾಕುವುದು ಕಡ್ಡಾಯವಾಗಿದೆ. "ಅಮೆರಿಕನ್ನರ ಅಂತರಾಷ್ಟ್ರೀಯ ವಿಮಾನ ಪ್ರಯಾಣವನ್ನು ಸುರಕ್ಷಿತವಾಗಿರಿಸಲು ಈ ಹೊಸ ಅಂತಾರಾಷ್ಟ್ರೀಯ ಪ್ರಯಾಣ ನಿಯಮವು ವಿಜ್ಞಾನವನ್ನು ಅನುಸರಿಸುತ್ತದೆ," ಎಂದು ಕೂಡಾ ಇದೇ ಸಂದರ್ಭದಲ್ಲಿ ಜೆಫ್ರಿ ಜಿಯೆಂಟ್ಸ್ ಮಾಹಿತಿ ನೀಡಿದ್ದಾರೆ.
ಈ ಕೂಡಲೇ ಅಮೆರಿಕದ ಹೊಸ ಪ್ರಯಾಣ ಮಾರ್ಗಸೂಚಿಯನ್ನು ಟ್ರೇಡ್ ಗ್ರೂಪ್ ಏರ್ಲೈನ್ಸ್ ಫಾರ್ ಯುರೋಪ್ ಸ್ವಾಗತ ಮಾಡಿದೆ. "ಈ ನಿರ್ಧಾರವು ಟ್ರಾನ್ಸ್-ಅಟ್ಲಾಂಟಿಕ್ ಟ್ರಾಫಿಕ್ ಮತ್ತು ಪ್ರವಾಸೋದ್ಯಮಕ್ಕೆ ಅಗತ್ಯವಾದ ಉತ್ತೇಜನವನ್ನು ನೀಡುತ್ತದೆ ಮತ್ತು ಕುಟುಂಬಗಳು ಮತ್ತು ಸ್ನೇಹಿತರನ್ನು ಮತ್ತೆ ಸೇರಿಸುತ್ತದೆ," ಎಂದು ಹೇಳಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಯುರೋಪಿಯನ್ ಯೂನಿಯನ್ ಹಾಗೂ ಬ್ರಿಟನ್‌ಗೆ ಗಡಿಗಳನ್ನು ಪುನಃ ತೆರೆಯುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು.
ಪ್ರಸ್ತುತ ಯುರೋಪಿಯನ್ ದೇಶಗಳಿಂದ ಯುಎಸ್ ನಾಗರಿಕರು, ನಿವಾಸಿಗಳು ಹಾಗೂ ವಿದೇಶಿಗಳಿಗೆ ವಿಶೇಷ ವೀಸಾದ ಮೂಲಕ ಯುಎಸ್‌ಗೆ ಆಗಮಿಸಲು ಅವಕಾಶವಿದೆ. ಈ ನಿರ್ಬಂಧವು ಇಯು ಹಾಗೂ ಬ್ರಿಟಿಷ್ ಸರ್ಕಾರಕ್ಕೆ ಭಾರೀ ತೊಂದರೆಯನ್ನು ಉಂಟು ಮಾಡಿದೆ. ಈ ಹಿನ್ನೆಲೆ ಸೋಮವಾರ ಯುರೋಪಿಯನ್ ಒಕ್ಕೂಟವು ಸದಸ್ಯ ರಾಷ್ಟ್ರಗಳು ಅಮೆರಿಕದ ಪ್ರಯಾಣಿಕರಿಗೆ ಲಸಿಕೆ ಹಾಕಿದರೆ ಪ್ರವೇಶವನ್ನು ನೀಡುವ ನಿಯಮವನ್ನು ಕೂಡಾ ಬಿಗಿಗೊಳಿಸಿ, ಪ್ರಯಾಣಕ್ಕೆ ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿದೆ. ಇನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ರ ಈ ಕ್ರಮವು ಕೋವಿಡ್ ವಿಚಾರದಲ್ಲಿ ನ್ಯೂಯಾರ್ಕ್‌ನಲ್ಲಿ ವಾರ್ಷಿಕ ಯುಎನ್ ಜನರಲ್ ಅಸೆಂಬ್ಲಿಯಲ್ಲಿ ತನ್ನ ಭಾಷಣದ ಮುನ್ನಾದಿನದಂದು ಮುಂಚಿನ ದಿನದಂದು ಪ್ರಕಟವಾಗಿದೆ.