ಮಂಗಳೂರು; ಒಂದಲ್ಲಾ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಖಾಸಗಿ ಸಂಸ್ಥೆ ಅದಾನಿಗೆ ಗ್ರೂಪ್ ತೆಕ್ಕೆಗೆ ಹೋದ ಬಳಿಕ ಹೆಸರು ಬದಲಾವಣೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡ ಸದ್ದು ಮಾಡಿತ್ತು.
ಮಂಗಳೂರು ಅಂತರಾಷ್ಟ್ರೀಯವಿಮಾನ ನಿಲ್ದಾಣದ ಹೆಸರನ್ನು ಅದಾನಿ ಏರ್‌ರ್ಪೋಟ್ ಎಂದು ಹೆಸರು ಬದಲಿಸಿದಾಗ ಭಾರೀ ವಿರೋಧ ವ್ಯಕ್ತವಾಗಿತ್ತು. ಇದೀಗ ಕೊನೆಗೂ ಕಾನೂನು ಹೋರಾಟಕ್ಕೆ ಮಣಿದ ಅದಾನಿ ಸಂಸ್ಥೆ ಹೆಸರು ವಾಪಾಸು ಪಡೆದು ಹಿಂದಿನ ಹೆಸರಾ 'ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ' ಎಂದು ಬದಲಾವಣೆ ಮಾಡಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಣೆ ಮಾಡಲೆಂದು ಕೇಂದ್ರ ಸರ್ಕಾರ ಅದಾನಿ ಸಂಸ್ಥೆಗೆ ಗುತ್ತಿಗೆ ನೀಡಿತ್ತು. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ನಡುವೆ ಗುತ್ತಿಗೆ ಪಡೆದ ಅದಾನಿ ಸಂಸ್ಥೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂಬ ಹೆಸರಿನ ಜೊತೆಗೆ ಅದಾನಿ ಏರ್ಪೋಟ್ ಎಂದು ಮರುನಾಮಕರಣ ಮಾಡಿತ್ತು.
ಸಂಸ್ಥೆಯ ಈ ನಿರ್ಧಾರ ದಕ್ಷಿಣ ಕನ್ನಡ ಜಿಲ್ಲೆಯ ಜನರ ಕೆಂಗಣ್ಣಿಗೆ ಕಾರಣವಾಗಿತ್ತು. ಹೀಗಾಗಿ ಈ ಬಗ್ಗೆ ಕಾನೂನು ಹೋರಾಟ ಮಾಡಿದ ರಾಜಕೀಯ ರಹಿತ ಸಮಾನ ಮನಸ್ಕರ ತಂಡ ಇದೀಗ ವಾಪಾಸ್ ಹಳೆ ಹೆಸರನ್ನು ಉಳಿಸುವಲ್ಲಿ ಯಶಸ್ವಿಯಾಗಿದೆ.