ಭೋಪಾಲ್: ಮಕ್ಕಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಗೇಮಿಂಗ್ ವ್ಯಸನವು ಅವರಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಸೃಷ್ಟಿಸಲು ಕಾರಣವಾಗಬಹುದು ಎಂದ ರಾಜಸ್ಥಾನ ಸರಕಾರವು ಪೋಷಕರಿಗೆ ಮತ್ತು ಶಿಕ್ಷಕರಿಗೆ ಸಲಹೆ ನೀಡಿದೆ ಆನ್ ಲೈನ್ ಗೇಮಿಂಗ್ ವ್ಯಸನದಿಂದ ಮಕ್ಕಳನ್ನು ರಕ್ಷಿಸಲು ಕ್ರಮಗಳನ್ನೂ ಸೂಚಿಸಿದೆ.
ಆನ್ ಲೈನ್ ಗೇಮಿಂಗ್ ನಲ್ಲಿ ಮಕ್ಕಳ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ರಾಜಸ್ಥಾನ ಶಾಲಾ ಶಿಕ್ಷಣ ಮಂಡಳಿಯು ಶನಿವಾರ ಸಲಹೆಗಳನ್ನು ನೀಡಿದೆ. ಮಕ್ಕಳು ಅಸಹಜವಾಗಿ ವರ್ತಿಸುತ್ತಿದ್ದರೆ, ಅವರು ಆನ್ ಲೈನ್ ಕಾಲ ಕಳೆಯುವುದು ಕ್ರಮೇಣ ಹೆಚ್ಚಾಗುತ್ತಿದ್ದರೆ, ಸಾಮಾಜಿಕ ಮಾಧ್ಯಮಗಳನ್ನು ಮತ್ತು ಇಂಟರ್ನೆಟ್ ಅನ್ನು ಹೆಚ್ಚಾಗಿ ಬಳಸಿದ ಬಳಿಕ ಅವರ ವರ್ತನೆಯು ಆಕ್ರಮಣಕಾರಿಯಾಗಿ ಬದಲಾಗಲು ಪ್ರಾರಂಭವಾಗಿದ್ದರೆ ಪೋಷಕರು ಮತ್ತು ಶಿಕ್ಷಕರು ಅಂತಹಾ ಮಕ್ಕಳ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ.
ಮನೆಯಲ್ಲಿ ಇಂಟರ್ ನೆಟ್ ಗೆ ಕಡಿವಾಣ ಹಾಕುವ ಇಂಟರ್ನೆಟ್ ಗೇಟ್ ವೇ ಅನ್ನು ಬಳಸುವಂತೆ ಸಲಹೆ ನೀಡಿದೆ. ಇದು ಮಕ್ಕಳಲ್ಲಿನ ಇಂಟರ್ನೆಟ್ ಬಳಕೆಗಳನ್ನು ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಿದೆ. ಕುಟುಂಬಸ್ಥರು ಜೊತೆಗಿರುವಂತೆಯೇ ಕಂಪ್ಯೂಟರ್ ಬಳಸಲು ಮಕ್ಕಳಿಗೆ ಅನುಮತಿ ನೀಡಬೇಕು. ಈ ತಂತ್ರಜ್ಞಾನದ ಯುಗದಲ್ಲಿ, ಆನ್‌ಲೈನ್ ಗೇಮಿಂಗ್ ಮಕ್ಕಳಲ್ಲಿ ಬಹಳ ಜನಪ್ರಿಯವಾಗಿದೆ. ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಶಾಲೆಗಳನ್ನು ಮುಚ್ಚುವುದರಿಂದ ಮಕ್ಕಳಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆ ಹೆಚ್ಚಾಗಿದೆ, ಈ ಕಾರಣದಿಂದಾಗಿ ಮಕ್ಕಳಲ್ಲಿ ಆನ್‌ಲೈನ್ ಗೇಮಿಂಗ್ ಪ್ರವೃತ್ತಿ ವೇಗವಾಗಿ ಬೆಳವಣಿಗೆಯಾಗಿದೆ ಎಂದು ಕೌನ್ಸಿಲ್ ನ ಉಪ ಆಯುಕ್ತರಾದ ಸನಾ ಸಿದ್ದೀಕಿ ಹೇಳಿದ್ದಾರೆ.
"ಮಕ್ಕಳು ಈ ಆಟಗಳನ್ನು ಅತಿ ಉತ್ಸಾಹದಿಂದ ಆಡುವುದಕ್ಕಾಗಿಯೇ ಗೇಮ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗುತ್ತದೆ. ಇದು ಆಟಗಾರನನ್ನು ಪ್ರಚೋದಿಸುತ್ತದೆ ಮತ್ತು ಅವರು ಗೇಮಿಂಗ್ ವ್ಯಸನಿಗಳಾಗುತ್ತಾರೆ. ಅಂತಿಮವಾಗಿ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ. ಈ ಕಾರಣದಿಂದಾಗಿ ಮಗುವಿನ ಶೈಕ್ಷಣಿಕ ಮತ್ತು ಸಾಮಾಜಿಕ ಜೀವನ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ಅವರು ಹೇಳಿಕೆ ನೀಡಿದ್ದಾರೆ.