ನವದೆಹಲಿ : ಸರ್ವೋಚ್ಚ ನ್ಯಾಯಾಲಯದಲ್ಲಿ ವರ್ಚುವಲ್ ವಿಚಾರಣೆಗಳಿಗಾಗಿ ಹೊಸದಾಗಿ ಅಳವಡಿಸಲಾಗಿರುವ ತಂತ್ರಾಂಶದ ಬಗ್ಗೆ ಶುಕ್ರವಾರ ಬಹಿರಂಗವಾಗಿ ಅತೃಪ್ತಿಯನ್ನು ವ್ಯಕ್ತಪಡಿಸಿದ ಭಾರತದ ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ,'ಈ ತಂತ್ರಾಶವನ್ನು ತೆಗೆದುಹಾಕಿ ಮತ್ತು ಹಳೆಯದನ್ನೇ ತನ್ನಿ. ಈ ಹೊಸ ತಂತ್ರಾಂಶದಿಂದ ನಾನು ಬೇಸತ್ತಿದ್ದೇನೆ 'ಎಂದು ನ್ಯಾಯಾಲಯದ ಕೊಠಡಿಯಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳು ಮತ್ತು ತಂತ್ರಜ್ಞರಿಗೆ ಸೂಚಿಸಿದರು.
ಕೋವಿಡ್ ಹಿನ್ನೆಲೆಯಲ್ಲಿ ನ್ಯಾಯಾಲಯವು ಸುಮಾರು ಎರಡು ವರ್ಷಗಳ ಹಿಂದೆ ಭೌತಿಕ ವಿಚಾರಣೆಯಿಂದ ವರ್ಚುವಲ್ ವಿಚಾರಣೆ ವಿಧಾನಕ್ಕೆ ಪರಿವರ್ತನೆಗೊಂಡಿದ್ದು,ಒಂದು ದಿನದ ಕಲಾಪವೂ ನಷ್ಟವಾಗಿಲ್ಲ. ಆದರೆ ಸೂಕ್ತ ತಂತ್ರಾಂಶದ ಕೊರತೆ ಅದನ್ನು ಕಾಡುತ್ತಿರುವಂತಿದೆ. ಸೆ.1ರಿಂದ ನ್ಯಾಯಾಲಯವು ಭೌತಿಕ ಮತ್ತು ವರ್ಚುವಲ್ ವಿಧಾನಗಳಲ್ಲಿ ಮಿಶ್ರ ವಿಚಾರಣೆಯನ್ನು ಆರಂಭಿಸಿದೆಯಾದರೂ ಮೂರನೇ ಅಲೆ ಅಪ್ಪಳಿಸುವ ಸಾಧ್ಯತೆಯ ವರದಿಗಳ ಹಿನ್ನೆಲೆಯಲ್ಲಿ ವರ್ಚುವಲ್ ವಿಚಾರಣೆ ವಿಧಾನ ಚಾಲ್ತಿಯಲ್ಲಿ ಮುಂದುವರಿದಿದೆ.
ಕೆಲ ದಿನಗಳ ಹಿಂದಷ್ಟೇ ಮೊದಲಿನ ವಿದ್ಯೋ ತಂತ್ರಾಂಶವನ್ನು ಬದಲಿಸಿ ಸಿಸ್ಕೋ ತಂತ್ರಾಂಶವನ್ನು ಅಳವಡಿಸಲಾಗಿತ್ತು. ವಾಸ್ತವದಲ್ಲಿ ವಿದ್ಯೋದ ಬಗ್ಗೆ ಅಸಮಾಧಾನವನ್ನು ಹೊಂದಿದ್ದ ಕೆಲವು ವಕೀಲರು ಸಿಸ್ಕೋಗೆ ಬಲಾವಣೆಯನ್ನು ಶ್ಲಾಘಿಸಿದ್ದರು.
ಸುದೀರ್ಘ ಸಮಯ ವಿದ್ಯೋ ತಂತ್ರಾಂಶದ ನೆರವಿನೊಂದಿಗೆ ವರ್ಚುವಲ್ ವಿಚಾರಣೆಗಳು ನಡೆದಿದ್ದು,ಕಳಪೆ ಸಂಪರ್ಕ,ಪ್ರತಿಧ್ವನಿಗಳು ಮತ್ತು ಇತರ ವ್ಯತ್ಯಯಗಳ ಬಗ್ಗೆ ವಕೀಲರು ದೂರಿಕೊಂಡಿದ್ದರು. ಹಲವಾರು ಸಂದರ್ಭಗಳಲ್ಲಿ ನ್ಯಾಯಾಧೀಶರು ಸಹ ವಿಚಾರಣೆ ಸಂದರ್ಭಗಳಲ್ಲಿ ತಾಂತ್ರಿಕ ವ್ಯತ್ಯಯಗಳ ಬಗ್ಗೆ ತಮ್ಮ ಅಸಮಾಧಾನವನ್ನು ದಾಖಲಿಸಿದ್ದರು.