ಕುಂಬಳೆ: ಗುತ್ತಿಗೆ ಕೈಗೊಂಡರೂ ನಿರ್ಮಾಣಕ್ಕೆ ಯಾವುದೇ ಕ್ರಮ ಕೈಗೊಳ್ಳದಿರುವುದರಿಂದ ಪೋಲೀಸ್ ನೆರವು ಬಳಸಿ ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಹೆಚ್ಚು ಜನನಿಬಿಡ ಪೇಟೆಯಾಗಿ ಬೆಳೆಯುತ್ತಿರುವ ಪುತ್ತಿಗೆ ಪಂಚಾಯತಿ ವ್ಯಾಪ್ತಿಯ ಸೀತಾಂಗೋಳಿ ಬದಿಯಡ್ಕ ರಸ್ತೆಯ ಸೀತಾಂಗೋಳಿ ಪೇಟೆಯಲ್ಲಿ ಅನುಮತಿಸಿಯೂ ನಿರ್ಮಿಸಲು ಬೀದಿ ವ್ಯಾಪಾರಿಗಳು ಅಡ್ಡಿಪಡಿಸಿದ್ದರು. ಪುತ್ತಿಗೆ ಗ್ರಾ.ಪಂ.ನ ಪ್ರಧಾನ ಪೇಟೆಯಾದ ಸೀತಾಂಗೋಳಿಯಲ್ಲಿ ಶೌಚಾಲಯ ನಿರ್ಮಿಸಲು ಈ ಹಿಂದೆ ಗುತ್ತಿಗೆ (ಟೆಮಡರ್)ಕರೆಯಲಾಗಿತ್ತು.
ಸೀತಾಂಗೋಳಿ ಹಾಗೂ ಬಾಡೂರಿನಲ್ಲಿ ಶೌಚಾಲಯ ನಿರ್ಮಿಸಲು 9 ಲಕ್ಷ ರೂ.ಗಳನ್ನು ಮೀಸಲಿರಿಸಲಾಗಿತ್ತು. ಬಳಿಕ ಬಾಡೂರಿನಲ್ಲಿ ಶೌಚಾಲಯ ನಿರ್ಮಿಸಿದರೂ ಸೀತಾಂಗೋಳಿಯಲ್ಲಿ ನಿರ್ಮಿಸಲು ಸಾಧ್ಯವಾಗಿರಲಿಲ್ಲ. ಇಲ್ಲಿ ಶೌಚಾಲಯ ನಿರ್ಮಿಸುವ ಸ್ಥಳದಲ್ಲೇ ಬೀದಿಬದಿ ವ್ಯಾಪಾರಿಗಳು ಠಿಕಾಣಿ ಹೂಡಿದ್ದರಿಂದ ನಿರ್ಮಾಣ ಕಾರ್ಯ ಸಾಧ್ಯವಾಗಿರಲಿಲ್ಲ ರಾಜ್ಯ ಸರ್ಕಾರದ ನೂರು ದಿನಗಳ ಸವಿ ನೆನಪಿನ ನೂರು ಕಾರ್ಯಕ್ರಮಗಳು ಯೋಜನೆಯಲ್ಲಿ ಈ ಶೌಚಾಲಯ ಉದ್ಘಾಟಿಸಲು ಈ ಹಿಂದೆ ಚಿಂತಿಸಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.
ಈ ಬಗ್ಗೆ ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ಡಿ.ಸುಬ್ಬಣ್ಣ ಆಳ್ವ ಅವರು ಜಿಲ್ಲಾಧಿಕಾರಿಗೆ ದೂರು ನೀಡಿದ್ದರು. ಆ.28 ರಂದು ಜಿಲ್ಲಾ ಶುಚಿತ್ವ ಮಿಷನ್ ಸಭೆಯಲ್ಲಿ ಸಮಸ್ಯೆ ಚರ್ಚೆ ನಡೆಸಲಾಗಿತ್ತು. ಈ ವೇಳೆ ಪೋಲೀಸರ ರಕ್ಷಣೆಯಲ್ಲಿ ಶೀಘ್ರ ಶೌಚಾಲಯ ನಿರ್ಮಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಟೇಕ್ ಎ ಬ್ರೇಕ್ ಯೋಜನೆಯಡಿ ಕುಂಬಳೆ-ಬದಿಯಡ್ಕ ರಸ್ತೆಯ ಲೋಕೋಪಯೋಗಿ ಸ್ಥಳದಲ್ಲಿ ಶೌಚಾಲಯ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ.