ತಿರುವನಂತಪುರಂ: "ಕೇರಳದಲ್ಲಿ ಕ್ರೈಸ್ತ ಧರ್ಮ ಸಹಿತ ಯಾವುದೇ ಧಾರ್ಮಿಕ ಸಮುದಾಯ ಯಾವುದೇ ಗಂಭೀರ ಅಪಾಯವೆದುರಿಸುತ್ತಿಲ್ಲ, ರಾಜ್ಯವು ಕಳೆದ ಹಲವು ವರ್ಷಗಳಲ್ಲಿ ತನ್ನ ಜಾತ್ಯತೀತ ಆಧಾರಸ್ತಂಭಗಳನ್ನು ಭದ್ರಪಡಿಸಿಕೊಂಡಿದೆ,'' ಎಂದು ರಾಜ್ಯದ ಮಲಂಕರ ಜೆಕೊಬೈಟ್ ಸಿರಿಯಾಕ್ ಆರ್ಥೊಡಾಕ್ಸ್ ಚರ್ಚಿನ ನಿರನಮ್ ಧರ್ಮಪ್ರಾಂತ್ಯದ ಮೆಟ್ರೊಪಾಲಿಟನ್ ಆಗಿರುವ ಬಿಷಪ್ ಗೀವರ್ಗೀಸ್ ಮೋರ್ ಕೂರಿಲೋಸ್ ಹೇಳಿದ್ದಾರೆ ಎಂದು thequint.com ವರದಿ ಮಾಡಿದೆ.
ಪಾಲ ಧರ್ಮಪ್ರಾಂತ್ಯದ ಕ್ಯಾಥೊಲಿಕ್ ಬಿಷಪ್ ಮಾರ್ ಜೋಸೆಫ್ ಕಲ್ಲರಂಗಟ್ಟ್ ಅವರ 'ನಾರ್ಕಾಟಿಕ್ಸ್ ಜಿಹಾದ್' ಹೇಳಿಕೆ ವಿವಾದವೆಬ್ಬಿಸಿದ ಹಿನ್ನೆಲೆಯಲ್ಲಿ ಬಿಷಪ್ ಗೀವರ್ಗೀಸ್ ಅವರ ಹೇಳಿಕೆ ಬಂದಿದೆ. ಪಾಲ ಬಿಷಪ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದೂ ಅವರು ಹೇಳಿದ್ದಾರೆ.
"ಗೋಸ್ಪೆಲ್ ಪ್ರೀತಿಯ ಬಗ್ಗೆ ಹೇಳುತ್ತದೆಯೇ ಹೊರತು ದ್ವೇಷವನ್ನಲ್ಲ. ನನಗೆ ತಿಳಿದಿರುವ ಹಾಗೆ ಕೇರಳದಲ್ಲಿ ಬಲವಂತದ ಮತಾಂತರಗಳು ನಡೆಯುವುದಿಲ್ಲ,'' ಎಂದು ಅವರು ಹೇಳಿದರಲ್ಲದೆ ಪಾಲ ಬಿಷಪ್ ಅವರು ಹೇಳಿಕೆಯನ್ನು ನೀಡುವುದನ್ನು ತಪ್ಪಿಸಬಹುದಾಗಿತ್ತು ಅವರ ಹೇಳಿಕೆಯು ವಾಸ್ತವವನ್ನು ಆಧರಿಸಿಲ್ಲ ಎಂದಿದ್ದಾರೆ.
"ಇನ್ನೊಂದು ಸಮುದಾಯದ ಮೇಲೆ ಸಂಪೂರ್ಣ ಆರೋಪ ಹೊರಿಸುವ ನಿಂದನಾತ್ಮಕವಾದ ಒಂದು ಹೇಳಿಕೆ ನೀಡುವುದು ಜನರಲ್ಲಿ ಮತೀಯ ಭಾವನೆಗಳನ್ನು ಹಾಗೂ ದ್ವೇಷದ ಭಾವನೆಗಳನ್ನು ಮೂಡಿಸುತ್ತದೆ,'' ಎಂದು ಅವರು ಹೇಳಿದರು.
"ಇಂತಹ ಅಪರಾಧಗಳು ನಡೆಯುತ್ತವೆಯೆಂದು ಅವರಿಗೆ ಖಚಿತವಾಗಿದ್ದರೆ ಅವರು ಪೊಲೀಸ್ ದೂರು ದಾಖಲಿಸಬಹುದಾಗಿತ್ತು. ಪ್ರಜಾಪ್ರಭುತ್ವದಲ್ಲಿ ಅವರ ಮುಂದೆ ಉಳಿದಿದ್ದ ಆಯ್ಕೆ ಇದೇ ಆಗಿತ್ತು,'' ಎಂದು ಬಿಷಪ್ ಗೀವರ್ಗೀಸ್ ಹೇಳಿದರು
"ಕೇರಳದಲ್ಲಿ ಕ್ರೈಸ್ತರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಹಾಗೂ ಸಾಮಾಜಿಕ-ಆರ್ಥಿಕ ಪ್ರಭಾವವನ್ನೂ ಅವರು ಸಾಕಷ್ಟು ಹೊಂದಿದ್ದಾರೆ, ಸಮುದಾಯ ಭಯಪಡುವ ಅಗತ್ಯವಿಲ್ಲ.'' ಎಂದು ಅವರು ಹೇಳಿದ್ದಾರೆ.
ವಿವಾದಾತ್ಮಕ 'ನಾರ್ಕಾಟಿಕ್ಸ್ ಜಿಹಾದ್' ಹೇಳಿಕೆ ಕುರಿತಂತೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಪ್ರಥಮ ಬಿಷಪ್ ಇವರಾಗಿದ್ದಾರೆ.