ಕೊಚ್ಚಿ: ಮರಡು ಫ್ಲಾಟ್ಸ್ ನೆಲಸಮ ಪ್ರಕರಣದ ತೀರ್ಪಿಗೆ ಸಂಬಂಧಿಸಿದಂತೆ ಹಾಲಿ ನ್ಯಾಯಮೂರ್ತಿ ಮತ್ತು ಇಬ್ಬರು ವಿಶ್ರಾಂತ ನ್ಯಾಯಮೂರ್ತಿಗಳ ವಿರುದ್ಧ ನ್ಯಾಯಾಂಗ ದುರ್ವರ್ತನೆ ಕುರಿತ ಆರೋಪದ ಅಂಶಗಳನ್ನು ಪರಿಗಣಿಸುವುದಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
'ಇಂಥ ಅರ್ಜಿಗಳನ್ನು ವಿಚಾರಣೆಗೆ ಪುರಸ್ಕರಿಸಿದರೆ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುವುದಾದರೂ ಹೇಗೆ?' ಅವರು ಹೇಗೆ ತೀರ್ಪು ನೀಡಬಲ್ಲರು? ಅವರೂ ಕೂಡ ಮನುಷ್ಯರೇ' ಎಂದು ನ್ಯಾಯಮೂರ್ತಿ ಪಿ.ಬಿ.ಸುರೇಶ್ ಕುಮಾರ್ ಅವರು ಈ ಕುರಿತ ಅರ್ಜಿಗಳ ಅಲ್ಪ ಕಾಲದ ವಿಚಾರಣೆಯ ಸಂದರ್ಭದಲ್ಲಿ ಹೇಳಿದರು.
ಅರ್ಜಿಗಳು ವಿಚಾರಣೆಗೆ ಅರ್ಹವೇ ಎಂದಷ್ಟೇ ಪರಿಶೀಲಿಸಲಾಗುವುದು. ನ್ಯಾಯಾಂಗದ ದುರ್ವರ್ತನೆ ಆರೋಪ ಕುರಿತ ಅಂಶಗಳನ್ನು ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸೆ.6ಕ್ಕೆ ವಿಚಾರಣೆ ಮುಂದೂಡಲಾಯಿತು.
ವಕೀಲ ಯಶವಂತ ಶೆಣೈ ಅವರ ಮೂಲಕ ಸಲ್ಲಿಸಿದ್ದ ಎರಡೂ ಅರ್ಜಿಗಳಲ್ಲಿ, ನ್ಯಾಯಾಂಗದ ದುರ್ವರ್ತನೆ ಕುರಿತ ತಮ್ಮ ಆರೋಪಗಳ ತನಿಖೆಗೆ ಸಮಿತಿ ರಚಿಸಬೇಕು ಎಂದು ಕೋರಲಾಗಿತ್ತು.