ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡ ಹಾಗೂ ವಿದೇಶಕ್ಕೆ ಪ್ರಯಾಣಿಸಲು ಬಯಸುವವರು ಜನ್ಮ ದಿನಾಂಕವನ್ನು ದಾಖಲಿಸಿರುವ ಪ್ರಮಾಣ ಪತ್ರ ಪಡೆಯಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೋವಿಡ್ ಲಸಿಕೆಯ ಪ್ರಮಾಣ ಪತ್ರದ ಕುರಿತಂತೆ ಭಾರತ ಹಾಗೂ ಬ್ರಿಟನ್ ನಡುವೆ ಚರ್ಚೆ ನಡೆಯುತ್ತಿರುವ ನಡುವೆ ಭಾರತ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಸಕ್ತ ಕೋವಿಡ್ ಪ್ರಮಾಣ ಪತ್ರ ಇತರ ವಿವರಗಳೊಂದಿಗೆ ಫಲಾನುಭವಿಯ ಜನ್ಮ ದಿನಾಂಕದ ಆಧಾರದ ಮೇಲೆ ಪ್ರಾಯವನ್ನು ಮಾತ್ರ ದಾಖಲಿಸುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ನಿಯಮಗಳನ್ನು ಅನುಸರಿಸಿ ಪ್ರಮಾಣ ಪತ್ರದಲ್ಲಿ ಈ ಹೊಸ ಬದಲಾವಣೆ ತರಲಾಗಿದೆ. ಜನ್ಮ ದಿನಾಂಕ ದಾಖಲಿಸಿದ ಪ್ರಮಾಣಪತ್ರಗಳು ಮುಂದಿನ ವಾರದಿಂದ ಲಭ್ಯವಾಗಲಿದೆ ಎಂದು ಮೂಲಗಳು ತಿಳಿಸಿವೆ. ''ಕೋವಿಡ್ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದುಕೊಂಡವರ ಹಾಗೂ ವಿದೇಶಗಳಿಗೆ ಪ್ರಯಾಣಿಸಲು ಬಯಸುವವರ ಲಸಿಕಾ ಪ್ರಮಾಣ ಪತ್ರದಲ್ಲಿ ಸಂಪೂರ್ಣ ಜನ್ಮ ದಿನಾಂಕ ನಮೂದಿಸುವ ನೂತನ ಅಂಶವನ್ನು ಸೇರಿಸಲು ನಿರ್ಧರಿಸಲಾಗಿದೆ'' ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟನ್ ಅನುಮೋದಿತ ಕೋವಿಡ್ ಲಸಿಕೆಗಳಲ್ಲಿ ಆಸ್ಟ್ರಾಝೆನಕಾ ಲಸಿಕೆಯ ಭಾರತ ಉತ್ಪಾದಿತ ಆವೃತ್ತಿ ಸೇರಿಸಲು ತನ್ನ ನೂತನ ಪ್ರಯಾಣ ಮಾರ್ಗಸೂಚಿಯಲ್ಲಿ ಬುಧವಾರ ತಿದ್ದುಪಡಿ ತಂದಿತ್ತು.