ನವದೆಹಲಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ವಿಮಾನ ಪ್ರಯಾಣದ ವೇಳೆ ಕಡತಗಳನ್ನು ಪರಿಶೀಲಿಸುತ್ತಿರುವ ಫೋಟೊವೊಂದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.
'ದೀರ್ಘ ವಿಮಾನ ಪ್ರಯಾಣದ ಮತ್ತೊಂದು ಅರ್ಥವೆಂದರೆ ಕಾಗದ ಪತ್ರಗಳ ಮತ್ತು ಇತರ ಕಡತಗಳ ಕೆಲಸವನ್ನು ನಿರ್ವಹಿಸಲು ಸಿಗುವ ಸದವಕಾಶ' ಎಂದು ಟ್ವೀಟ್‌ನಲ್ಲಿ ನರೇಂದ್ರ ಮೋದಿ ಬರೆದಿದ್ದಾರೆ.
ಪ್ರಧಾನಿ ಮೋದಿ ಅವರ ಈ ಫೋಟೋಗೆ ಸಾಮಾಜಿಕ ತಾಣಗಳಲ್ಲಿ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಮಯ ಸದ್ಬಳಕೆಗೆ ನೆಟ್ಟಿಗರಿಂದ ಬಹು ಪರಾಕ್ ಸಿಕ್ಕಿದೆ. ಒಂದೆಡೆ ಮೋದಿ ಅಭಿಮಾನಿಗಳು, ದಿನದ 18 ಗಂಟೆಗಳ ಕಾಲ ಪ್ರಧಾನಿ ಮೋದಿ ದೇಶದ ಕೆಲಸದಲ್ಲಿ ಮಗ್ನರಾಗಿರುತ್ತಾರೆ ಎಂಬುದಕ್ಕೆ ತಾಜಾ ಉದಾಹರಣೆಯಿದು ಎಂದು ಬಣ್ಣಿಸುತ್ತಿದ್ದಾರೆ. ಎಂದಿನಂತೆ ಇದೂ ಒಂದು ಫೋಟೋ ಶೋಕಿ ಎಂದು ವಿಪಕ್ಷಗಳು ಟೀಕಿಸುತ್ತಿವೆ.
ಬಿರ್ಲಾ ಪ್ರೆಸಿಷನ್ಸ್ ಟೆಕ್ನಾಲಜಿಯ ಮುಖ್ಯಸ್ಥ ವೇದಾಂತ್ ಬಿರ್ಲಾ, 'ನಾವಿಲ್ಲಿ ಯಾವುದೇ ಅಧಿಕಾರಕ್ಕಾಗಿ ಇಲ್ಲ, ಅದರೆ ಅದೊಂದು ಜವಾಬ್ದಾರಿ. ನಿಮ್ಮ ಕಠಿಣ ಶ್ರಮ ಇಂದಿನ ಯುವಕರಿಗೆ ಸ್ಪೂರ್ತಿ. ನಿಮ್ಮ ಆಡಳಿತದಲ್ಲಿ ಭಾರತ ಸಾಧನೆಗಳ ಹೊಸ ಎತ್ತರಕ್ಕೆ ಏರಿದೆ' ಎಂದು ಹೊಗಳಿದ್ದಾರೆ.
ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿವಿ ಪ್ರತಿಕ್ರಿಯಿಸಿದ್ದು,
'1. ಕಾಗದಗಳು ಎಡ ಭಾಗದಲ್ಲಿವೆ.
2. ಕಣ್ಣಿನ ದೃಷ್ಟಿ ಬಲಭಾಗದಲ್ಲಿದೆ.
3. ಕಾಗದಗಳ ಕೆಳಗಿಂದ ಮೊಬೈಲ್‌ನ ಬೆಳಕು ಮೇಲ್ಮುಖವಾಗಿದೆ.
ಈ ಮಧ್ಯೆ ನಡೆಯುತ್ತಿರುವುದಾದರೂ ಏನು?' ಎಂದು ಅನುಮಾನದಿಂದ ಪ್ರಶ್ನಿಸಿದ್ದಾರೆ.
ಮಾರಲು ಇನ್ಯಾವ ಆಸ್ತಿಯ ಪಟ್ಟಿ ನೋಡುತ್ತಿದ್ದೀರಿ?: ಮೋದಿಗೆ ಕಾಂಗ್ರೆಸ್ ಪ್ರಶ್ನೆ
ರಾಜಕೀಯ ಪ್ರೇರಿತ ಹೊಗಳಿಕೆ ಮತ್ತು ಟೀಕೆಗಳ ಮಧ್ಯೆ ಒಂದಷ್ಟು ನೆಟ್ಟಿಗರು ಮೋದಿ ಪಕ್ಕದ ಸೀಟಿನ ಮೇಲಿರುವ ದೊಡ್ಡ ಬ್ಯಾಗಿಗೆ ಸಣ್ಣ ಬೀಗ ಹಾಕಿರುವುದನ್ನು ಮೀಮ್‌ನ ವಸ್ತುವನ್ನಾಗಿಸಿ ನಗಿಸುತ್ತಿದ್ದಾರೆ.
'ನಾನು ಮತ್ತು ಮೋದಿಜೀ ಒಂದೇ. ಲಗೇಜ್ ಬ್ಯಾಗಿಗೆ ಸಣ್ಣ ಬೀಗ ಹಾಕುತ್ತೇವೆ. ಇದು ಖಂಡಿತವಾಗಿಯೂ ಮಧ್ಯಮ ವರ್ಗದ ಭಾವನೆಯನ್ನು ಮೂಡಿಸುತ್ತಿದೆ.' ಎಂದು ಮಿಂಟಿ ಶರ್ಮಾ ಎಂಬುವವರು ಪ್ರತಿಕ್ರಿಯಿಸಿದ್ದಾರೆ.
ರಾಮ ಸೇತು ಕಡತ ಕಳಿಸಿ:
ರಾಮಚಂದ್ರನ್ ಆರ್ ಎಂಬುವವರು ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಅವರನ್ನು ಉಲ್ಲೇಖಿಸಿ, ಇತ್ಯರ್ಥವಾಗದೆ ಉಳಿದುಕೊಂಡಿರುವ ರಾಮ ಸೇತು ಕಡತವನ್ನು ಮೋದಿ ಅವರಿಗೆ ಕಳುಹಿಸಿಕೊಡಿ. ಇದರಿಂದ ಸುಬ್ರಮಣಿಯನ್ ಸ್ವಾಮಿ ಅವರಿಗೆ ಸಂತೋಷವಾಗುತ್ತದೆ ಎಂದು ಕಮೆಂಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸ್ವಾಮಿ, ಇದರಿಂದ ನಿಜವಾದ ಹಿಂದೂವಿಗೆ ಸಂತೋಷವಾಗುತ್ತದೆ. ಇದು ಯಾರಿಗೂ ಬೇಸರವನ್ನುಂಟು ಮಾಡುವುದಿಲ್ಲ ಎಂದಿದ್ದಾರೆ.