ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಕೇಂದ್ರಾಡಳಿತ ಪ್ರದೇಶದ ಬಿಜೆಪಿ ಅಧ್ಯಕ್ಷ ರಣ್ವೀಂದರ್ ರೈನಾ ಶನಿವಾರ ಹೇಳಿದ್ದಾರೆ.
ಮುಂದಿನ ವರ್ಷದ ವೇಳೆಗೆ, ಹೊಸದಾಗಿ ರಚನೆಯಾಗಿರುವ ಕೇಂದ್ರಾಡಳಿತ ಪ್ರದೇಶದಲ್ಲಿ ಡಿಲಿಮಿಟೇಷನ್ ಪ್ರಕ್ರಿಯೆ ಮುಕ್ತಾಯಗೊಳ್ಳಲಿದ್ದು, ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
"ಭಯೋತ್ಪಾದಕರ ಬೆಂಬಲಿಗರು ಕೇಂದ್ರಾಡಳಿತ ಪ್ರದೇಶದಲ್ಲಿನ ಜನರ ಶತ್ರುಗಳಾಗಿದ್ದು, ಸರ್ಕಾರಿ ನೌಕರರಾಗಿರಲೀ, ರಾಜಕಾರಣಿಯಾಗಲೀ, ಅಥವಾ ಸಾಮಾನ್ಯ ಮಂದಿಯಾಗಲಿ ಎಲ್ಲರಿಗೂ ಸಮಾನವಾದ ಕಾನೂನಿನ ಪ್ರಕಾರ ನಡೆಸಿಕೊಳ್ಳಲಾಗುತ್ತದೆ" ಎಂದು ರೈನಾ ಹೇಳಿದ್ದಾರೆ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದ ಬಳಿಕ ಮಾತನಾಡಿರುವ ಅವರು ಡಿಲಿಮಿಟೆಷನ್ ಪ್ರಕ್ರಿಯೆ ವರ್ಷಾಂತ್ಯದ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆ.15 ರಂದು ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯ ಮೇಲೆ ಭಾಷಣ ಮಾಡುತ್ತಾ, " ಜಮ್ಮು-ಕಾಶ್ಮೀರದಲ್ಲಿ ಡಿಲಿಮಿಟೇಷನ್ ಪ್ರಕ್ರಿಯೆಯ ನಂತರ ಚುನಾವಣೆ ನಡೆಯುವ ಸಾಧ್ಯತೆ ಇದೆ" ಎಂದು ಹೇಳಿದ್ದರು. ಆದ್ದರಿಂದ ಮುಂದಿನ ವರ್ಷದ ಪ್ರಾರಂಭದಲ್ಲಿ ಚುನಾವಣೆ ನಡೆಯಲಿದೆ ಎಂದು ರೈನಾ ಹೇಳಿದ್ದಾರೆ.
ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳನ್ನು ಮರು ರಚಿಸುವ ಉದ್ದೇಶದಿಂದ 2020 ರ ಮಾರ್ಚ್ ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಡಿಲಿಮಿಟೇಷನ್ ಆಯೋಗವನ್ನು ರಚಿಸಿತ್ತು. ಆಯೋಗ ಇನ್ನಷ್ಟೇ ತನ್ನ ವರದಿಯನ್ನು ಸಲ್ಲಿಸಬೇಕಿದೆ.
ಜಮ್ಮು-ಕಾಶ್ಮೀರದಲ್ಲಿ 50 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವನ್ನು ಬಿಜೆಪಿ ಹೊಂದಿದೆ.