ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಮಂಗಳವಾರ ಹೆಲಿಕಾಪ್ಟರ್ ಒಂದು ಪತನವಾಗಿದ್ದು, ಇಬ್ಬರು ಸೇನಾ ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ ಸೇನಾ ಹೆಲಿಕಾಪ್ಟರ್ ಪತನವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು. ಈ ಘಟನೆಯಲ್ಲಿ ಇಬ್ಬರು ಸೇನಾ ಪೈಲಟ್‌ಗಳು ಗಾಯಗೊಂಡಿದ್ದಾರೆ ಎಂದು ಕೂಡಾ ವರದಿಯಾಗಿತ್ತು. ಈಗ ಆ ಸೇನಾ ಪೈಲಟ್‌ಗಳು ಸಾವನ್ನಪ್ಪಿದ್ದಾರೆ ಎಂದು ವರದಿಯು ತಿಳಿಸಿದೆ.
"ಸೇನಾ ಹೆಲಿಕಾಪ್ಟರ್ ಪತನವಾದ ಸಂದರ್ಭದಲ್ಲಿ ಇಬ್ಬರು ಪೈಲಟ್‌ಗಳು ತೀವ್ರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಈ ಇಬ್ಬರು ಪೈಲಟ್‌ಗಳನ್ನು ರಕ್ಷಣೆ ಮಾಡಿದರು. ಇಬ್ಬರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಈ ಸಂದರ್ಭದಲ್ಲಿ ವೈದ್ಯರು ಪೈಲಟ್‌ಗಳಿಬ್ಬರು ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ," ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಈ ಇಬ್ಬರು ಪೈಲಟ್‌ಗಳು ಮೇಜರ್ ರ್‍ಯಾಂಕ್ ಅಧಿಕಾರಿಗಳು ಆಗಿದ್ದರು," ಎಂದು ಹಿರಿಯ ಸೇನಾ ಅಧಿಕಾರಿ ತಿಳಿಸಿದ್ದಾರೆ. "ನಾವು ಅವರಿಬ್ಬರನ್ನು ಆಸ್ಪತ್ರೆಗೆ ದಾಖಲು ಮಾಡಿದೆವು. ಆದರೆ ಆಗಲೇ ಅವರಿಬ್ಬರು ಸಾವನ್ನಪ್ಪಿದ್ದಾರೆ," ಎಂದು ಕೂಡಾ ಅಧಿಕಾರಿ ಹೇಳಿದರು.
ಪತನವಾಗಿ ಧ್ವಂಸವಾಗಿರುವ ಹೆಲಿಕಾಪ್ಟರ್ ಕಣಿವೆ ಬದಿ ಬಿದ್ದಿರುವ ಹಾಗೂ ಸ್ಥಳೀಯರು ಪೈಲಟ್‌ಗಳನ್ನು ಹೊರಗೆ ಎಳೆಯುವ ಪ್ರಯತ್ನವನ್ನು ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ. ಈ ಘಟನೆಯು ಇಂದು ಬೆಳಿಗ್ಗೆ ಸುಮಾರು 10:30 ಗಂಟೆಗೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಜಿತೇಂದ್ರ ಸಿಂಗ್, "ಹೆಲಿಕಾಪ್ಟರ್ ಪತನದ ಸುದ್ದಿ ಕೇಳಿ ಆಘಾತ ಉಂಟಾಗಿದೆ," ಎಂದು ಹೇಳಿದ್ದಾರೆ.
ಹೆಲಿಕಾಪ್ಟರ್ ಅನ್ನು ಗುಡ್ಡದ ಮೇಲೆ ಇಳಿಸುವಾಗ ತೊಂದರೆ ಉಂಟಾಗಿದೆ ಎಂದು ಕೂಡಾ ಹೇಳಲಾಗುತ್ತಿದೆ. ಕಳೆದ ತಿಂಗಳು ಜಮ್ಮು ಮತ್ತು ಕಾಶ್ಮೀರದ ಕತುವಾದ ರಂಜಿತ್ ಸಾಗರ್ ಡ್ಯಾಮ್ ಸಹೋವರದಲ್ಲಿ ಹೆಲಿಕಾಪ್ಟರ್ ಪತನವಾಗಿತ್ತು. ಪೈಲಟ್ ನಾಪತ್ತೆಯಾಗಿದ್ದರು. ಈ ಹಿನ್ನೆಲೆ ಪತ್ತೆ ಕಾರ್ಯಾಚರಣೆ ನಡೆಸಲಾಗಿತ್ತು.