ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಮತ್ತೆ ವಿವಾದ ತಾರಕಕ್ಕೆ ಏರಿದೆ.
ಗೋಕರ್ಣ ಮಹಾಬಲೇಶ್ವರ ದೇವಾಲಯದ ಪ್ರಮುಖ ಪೂಜಾ ವಿಧಿ ವಿಧಾನಗಳ ಹಕ್ಕಿಗೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವಿನ ವಿವಾದ ಭುಗಿಲೆದ್ದಿದ್ದು, ದೇವಾಲಯದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿಸಲು ಬಂದ ಭಕ್ತಾದಿಗಳು ತೊಂದರೆ ಪಡುವಂತಾಗಿದೆ.
ಮಹಾಬಲೇಶ್ವರ ಮಂದಿರದ ಗರ್ಭಗುಡಿಯಲ್ಲಿರುವ ಆತ್ಮಲಿಂಗ ಪೀಠದಲ್ಲಿ ಆಸೀನರಾಗುವ ಮತ್ತು ನಂದಿಗೃಹದಲ್ಲಿನ ಪ್ರಸಾದ ವಿತರಣೆ ವಿಚಾರದಲ್ಲಿ ಉಪಾಧಿವಂತರ ಎರಡು ಬಣಗಳ ನಡುವೆ ವಿವಾದ ಏರ್ಪಟ್ಟಿದೆ. ಹೀಗಾಗಿ ಸೆಪ್ಟೆಂಬರ್ 27ರವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಪ ವಿಭಾಗಾಧಿಕಾರಿ ಸೂಚಿಸಿದ್ದಾರೆ.
ಈ ಸಂಬಂಧ ದೇವಸ್ಥಾನದ ಉಸ್ತುವಾರಿ ಸಮಿತಿ ಕಾರ್ಯದರ್ಶಿಯಾಗಿರುವ ಉಪ ವಿಭಾಗಾಧಿಕಾರಿ ರಾಹುಲ ಪಾಂಡೆಯವರು ಉಭಯ ಬಣಗಳ ಪ್ರತ್ಯೇಕ ಸಭೆ ನಡೆಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಉಪವಿಭಾಗಾಧಿಕಾರಿ ರಾಹುಲ ಪಾಂಡೆ, ಜಿಲ್ಲೆಯ ಎಲ್ಲ ದೇಗುಲಗಳಲ್ಲಿ ಭಕ್ತರಿಗೆ ಸೇವಾಕಾರ್ಯಗಳನ್ನು ಹಮ್ಮಿಕೊಳ್ಳಲು ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಆದರೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನದಲ್ಲಿ ಎರಡು ಬಣಗಳ ನಡುವಿನ ವಿವಾದದ ಕಾರಣ ಭಕ್ತರಿಗೆ ಅವಕಾಶ ಸಿಗುತ್ತಿಲ್ಲ ಎಂದಿದ್ದಾರೆ.
ಕೋವೀಡ್ ನಿಯಮಗಳ ಸಡಿಲಿಕೆ ಹಿನ್ನೆಲೆಯಲ್ಲಿ ಸಹಾಯಕ ಆಯುಕ್ತರು ಗೋಕರ್ಣ ಮಹಾಬಲೇಶ್ವರ ದೇವಾಲಯದಲ್ಲಿ ಭಕ್ತರ ಪೂಜಾ ಸೇವೆಗಳಿಗೆ ಅವಕಾಶ ನೀಡಿ ಆದೇಶ ಹೊರಡಿಸಿದ್ದರು.
ಆದರೆ ಆತ್ಮಲಿಂಗದ ಬಳಿ ಕುಳಿತು ಪೂಜೆ ಸಲ್ಲಿಸುವ ಹಕ್ಕಿನ ಕುರಿತಂತೆ ಅರ್ಚಕರ ಎರಡು ಗುಂಪುಗಳ ನಡುವಿನ ಗಲಾಟೆಯಿಂದ ಪೂಜಾ ಕಾರ್ಯ, ಆತ್ಮಲಿಂಗ ಸ್ಪರ್ಷ, ಪ್ರಸಾದ ಮೊದಲಾದ ಸೇವೆಗಳಿಗೆ ಅವಕಾಶ ಸಿಗದೆ ದೂರದ ಊರುಗಳಿಂದ ಬಂದ ಭಕ್ತರು ಮರಳುವಂತಾಗಿದೆ.
ಗೋಕರ್ಣ ದೇವಾಲಯದ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ಬರುವ ವರೆಗೆ ನಿವೃತ್ತ ನ್ಯಾಯಮೂರ್ತಿ ಬಿ.ಎಮ್. ಕೃಷ್ಣ ಅಧ್ಯಕ್ಷತೆಯಲ್ಲಿ ಮೇಲುಸ್ತುವಾರಿ ಸಮಿತಿ ರಚಿಸಲಾಗಿದ್ದು, ಕುಮಟಾ ಉಪ ವಿಭಾಗ ಅಧಿಕಾರಿಗಳನ್ನು ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ದೇಗುಲ ನಿರ್ವಹಣಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎನ್. ಶ್ರೀಕೃಷ್ಣ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 27ರಂದು ಸಮಿತಿಯ ಸಭೆ ನಡೆಯಲಿದೆ. ಎರಡು ಬಣಗಳ ನಡುವಿನ ವಿವಾದ, ಭಕ್ತರಿಗೆ ಪೂಜೆ ಹಾಗೂ ಸೇವೆಗೆ ವ್ಯವಸ್ಥೆ ವಿಷಯವನ್ನು ಸಭೆಯಲ್ಲಿ ಮಂಡಿಸಲಾಗುವುದು. ಸಭೆಯ ನಿರ್ಣಯದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲು ತಿಳಿಸಲಾಗಿದೆ.
ದೇವಾಲಯಕ್ಕೆ ಭೇಟಿ ನೀಡಿದ ಸಹಾಯಕ ಆಯುಕ್ತ ರಾಹುಲ್ ರತನ್ ಪಾಂಡೆ, ಎರಡು ಗುಂಪುಗಳ ಜೊತೆ ಚರ್ಚೆ ನಡೆಸಿ, ಸೆಪ್ಟೆಂಬರ್ 27ರಂದು ನಿರ್ವಹಣಾ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎಮ್. ಕೃಷ್ಣ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ವಿವಾದದ ವಿಷಯ ಮತ್ತು ಪೂಜಾ ಸೇವೆಗಳ ವಿಷಯ ಚರ್ಚಿಸಲಾಗುವುದು. ಅಲ್ಲಿಯವರೆಗೂ ದೇವಾಲಯದಲ್ಲಿ ಯಾವುದೇ ಗಲಾಟೆಗೆ ಅವಕಾಶ ನೀಡಬಾರದು ಎಂದು ಸೂಚಿಸಿದರು.
ಸದ್ಯ ಭಕ್ತರು ಹೊರಭಾಗದಿಂದ ಮಾತ್ರ ದೇವರ ದರ್ಶನಕ್ಕೆ ಅವಕಾಶ ಇದ್ದು, ಸ್ಥಳೀಯರು ವೈಯಕ್ತಿಕ ಪೂಜೆ ಸಲ್ಲಿಸಬಹುದಾಗಿದೆ. ಇದರಂತೆ ಸ್ಥಳೀಯರಿಗೆ ಬೆಳಗ್ಗೆ 6ರಿಂದ 11 ಹಾಗೂ ಮಧ್ಯಾಹ್ನ 5ರಿಂದ ರಾತ್ರಿ 7ರವರೆಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ.
ಆದರೆ ಉಪಾಧಿವಂತ ಪಂಗಡದ ಗುದ್ದಾಟದಿಂದಾಗಿ ಹೊರಭಾಗದಿಂದ ಬರುವ ಭಕ್ತರಿಗೆ ಆತ್ಮಲಿಂಗ ಸ್ಪರ್ಶ ಪೂಜೆ, ಪ್ರಸಾದಗಳಿಗೆ ಅವಕಾಶ ಮಾಡಿಕೊಡಲಾಗಿಲ್ಲ. ಇನ್ನೂ ದೇವಸ್ಥಾನದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.