ಅಲಿಗಡ: ಇಲ್ಲಿನ ಲೋಧಾ ಪಟ್ಟಣದಲ್ಲಿ ನೂತನವಾಗಿ ಸ್ಥಾಪಿಸಲಾಗುತ್ತಿರುವ ರಾಜಾ ಮಹೇಂದ್ರ ಪ್ರತಾಪ ಸಿಂಗ್ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಡಿಗಲ್ಲು ಹಾಕಲಿದ್ದಾರೆ.
ಅಲಿಗಡದ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ (ಎಎಂಯು) ಸ್ವಾತಂತ್ರ್ಯ ಹೋರಾಟಗಾರ ರಾಜಾ ಮಹೇಂದ್ರ ಪ್ರತಾಪ ಸಿಂಗ್ ಅವರು ಭೂಮಿ ನೀಡಿದ್ದರಿಂದ ವಿಶ್ವವಿದ್ಯಾಲಯಕ್ಕೆ ಅವರ ಹೆಸರನ್ನೇ ಇಡಬೇಕೆಂದು ಸ್ಥಳೀಯ ಬಿಜೆಪಿ ಘಟಕವು ಏಳು ವರ್ಷಗಳಿಂದ ಹೋರಾಟ ನಡೆಸುತ್ತಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು.
ಆದರೆ, ಇದೀಗ ಅಲಿಗಡದಿಂದ 40 ಕಿ.ಮೀ. ದೂರದ ಲೋಧಾದಲ್ಲಿ ರಾಜಾ ಮಹೇಂದ್ರ ಪ್ರತಾಪ ಸಿಂಗ್ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪನೆಯಾಗುತ್ತಿದೆ. ಬಿಜೆಪಿಯ ಏಳು ವರ್ಷಗಳ ಬೇಡಿಕೆ ಈಗ ಈಡೇರಿರುವುದು ಪಕ್ಷದ ಸ್ಥಳೀಯ ನಾಯಕರಿಗೆ ಸಂತಸ ತಂದಿದೆ.