ನವದೆಹಲಿ: ಕೊರೊನಾ ನಂತರ ರೋಗಿಗಳ ಆರೋಗ್ಯ ನಿರ್ವಹಣೆ ಸಂಬಂಧ ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಗುರುವಾರ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ.
ಕೊರೊನಾ ನಂತರ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳ ಕುರಿತು ವೈದ್ಯರಿಗೆ ಮಾರ್ಗದರ್ಶನ ನೀಡಲು ರಾಷ್ಟ್ರೀಯ ಸಮಗ್ರ ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ. ಕೊರೊನಾ ನಂತರದ ಆರೋಗ್ಯ ಸಮಸ್ಯೆಗಳನ್ನು ಅರ್ಥೈಸಿಕೊಂಡು ಸೂಕ್ತ ತಯಾರಿ ಹಾಗೂ ಚಿಕಿತ್ಸೆ ನೀಡಲು ಈ ಮಾರ್ಗಸೂಚಿಗಳು ನೆರವಾಗಲಿವೆ ಎಂದು ಮಾಂಡವಿಯಾ ತಿಳಿಸಿದ್ದಾರೆ.
'ಕೊರೊನಾ ಸೋಂಕಿನ ದೀರ್ಘಾವಧಿ ಆರೋಗ್ಯ ಪರಿಣಾಮಗಳ ನಿರ್ವಹಣೆ ಸಂಬಂಧ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮಾದರಿಗಳು ಇದರಲ್ಲಿವೆ. ಕೊರೊನಾ ಸೂಕ್ತ ನಿರ್ವಹಣೆಗೆ ವೈದ್ಯರು, ದಾದಿಯರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯವನ್ನು ಹೆಚ್ಚಿಸಲಿವೆ' ಎಂದು ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಟಣೆ ತಿಳಿಸಿದೆ.
ಕೊರೊನಾ ಸೋಂಕಿನ ಅಡ್ಡಪರಿಣಾಮಗಳನ್ನು ನಿರ್ವಹಿಸಲು ಹಾಗೂ ಸೋಂಕಿಗೆ ನೀಡಿದ ಚಿಕಿತ್ಸೆಯಿಂದ ಯಾವುದೇ ಋಣಾತ್ಮಕ ಪರಿಣಾಮ ಬೀರದಂತೆ ತಡೆಯಲು ಪೂರ್ವಭಾವಿ ಹಾಗೂ ಸಮಗ್ರ ಚಿಕಿತ್ಸೆಯ ಅಗತ್ಯವಿದೆ. ಈ ಅಗತ್ಯವನ್ನು ಮನಗಂಡು ಮಾರ್ಗಸೂಚಿ ಬಿಡುಗಡೆಗೊಳಿಸಲಾಗಿದೆ ಎಂದರು ಮನ್ಸುಖ್ ಮಾಂಡವಿಯಾ.
ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಭಾರತಿ ಪ್ರವೀಣ್ ಪವಾರ್ ಕೂಡ ಹಾಜರಿದ್ದರು.
'ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಸ್ಟೆರಾಯ್ಡ್‌ಗಳ ಸೇವನೆಯಿಂದಾಗಿ ಮ್ಯೂಕರ್‌ಮೈಕೋಸಿಸ್‌ನಂಥ (ಕಪ್ಪು ಶಿಲೀಂಧ್ರ) ಕೊರೊನಾ ನಂತರದ ಸಮಸ್ಯೆಗಳನ್ನು ಕಾಣುತ್ತಿದ್ದೇವೆ. ಚಿಕಿತ್ಸೆಯ ಭಾಗವಾಗಿ ಔಷಧಿ ತೆಗೆದುಕೊಳ್ಳುವುದು ಅವಶ್ಯಕವಾಗಿದ್ದು, ಇದರಿಂದ ಅಡ್ಡಪರಿಣಾಮವಾಗದಂತೆ ಅಥವಾ ಕಡಿಮೆ ಅಡ್ಡಪರಿಣಾಮಗಳನ್ನು ತಡೆಯಬೇಕಾಗಿದೆ. ಈ ಬಗ್ಗೆ ಮೊದಲೇ ಅರಿವಿದ್ದರೆ ಸಮಸ್ಯೆ ನಿರ್ವಹಣೆ ಕೂಡ ಸುಲಭವಾಗುತ್ತದೆ' ಎಂದು ಹೇಳಿದ್ದಾರೆ.
'ಕೊರೊನಾ ಸೋಂಕಿನಿಂದ ಚೇತರಿಸಿಕೊಂಡ ನಂತರ ಆವರಿಸುವ ಭಯ, ಮಾನಸಿಕ ಖನ್ನತೆಯಂಥ ಸಮಸ್ಯೆಗಳನ್ನು ನಿಭಾಯಿಸುವುದು ಮುಖ್ಯವಾಗಿದೆ. ಈಗೀಗ ಮಾನಸಿಕ ಖಿನ್ನತೆ ಪ್ರಕರಣಗಳು ಹೆಚ್ಚಾಗಿವೆ. ಹೀಗಾಗಿ ಕೋವಿಡ್ ನಂತರದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ಅವುಗಳನ್ನು ಪರಿಹರಿಸುವುದು ಮುಖ್ಯ. ದೇಶಾದ್ಯಂತ ಸಂಪನ್ಮೂಲ ವ್ಯಕ್ತಿಗಳಿಂದ ಕೊರೊನಾ ನಂತರದ ಸಮಸ್ಯೆಗಳ ನಿರ್ವಹಣೆಗೆ ಪ್ರಯತ್ನದ ರೂಪಕವಾಗಿ ಮಾರ್ಗಸೂಚಿ ಹೊರತರಲಾಗಿದೆ. ಆರೋಗ್ಯ ವೃತ್ತಿಪರರ ವಿವಿಧ ಕ್ಷೇತ್ರಗಳನ್ನು ಮನದಲ್ಲಿಟ್ಟುಕೊಂಡು ಈ ವಿಶೇಷ ಮಾಡ್ಯೂಲ್‌ಗಳನ್ನು ತಯಾರಿಸಲಾಗಿದೆ' ಎಂದು ಮಾಹಿತಿ ನೀಡಿದರು.
ಮಾನಸಿಕ ಆರೋಗ್ಯ ಮತ್ತು ಇತರ ಸಮಸ್ಯೆಗಳ ನಿರ್ವಹಣೆ ಸಂಬಂಧ ರಾಜ್ಯ ಆರೋಗ್ಯ ತಜ್ಞರ ಅಗತ್ಯಗಳನ್ನು ಆಧರಿಸಿ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ ಎಂದರು.
ಭಾರತದಲ್ಲಿ ಕೊರೊನಾ ಸೋಂಕು:
ದೇಶದಲ್ಲಿ ಗುರುವಾರ ಹೊಸ ಸೋಂಕಿತ ಪ್ರಕರಣಗಳ ಸಂಖ್ಯೆ 31,923ಕ್ಕೆ ಏರಿಕೆಯಾಗಿದೆ. ಇದೇ ಅವಧಿಯಲ್ಲಿ 282 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 31,990 ಸೋಂಕಿತರು ಗುಣಮುಖರಾಗಿದ್ದಾರೆ.
ಗುರುವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ 3,01,604 ಆಗಿದ್ದು, ಇದು ಕಳೆದ 187 ದಿನಗಳಲ್ಲೇ ಅತ್ಯಂತ ಕನಿಷ್ಠವಾಗಿದೆ. ಇದರ ಹೊರತಾಗಿ ದೇಶದಲ್ಲಿ 3,28,15,731 ಮಂದಿ ಸೋಂಕಿತರು ಗುಣಮುಖರಾಗಿದ್ದು, 4,46,050 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳಲ್ಲಿ 15,27,443 ಜನರಿಗೆ ಕೊವಿಡ್-19 ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ದೇಶದಲ್ಲಿ ಈವರೆಗೂ 55,83,67,013 ಜನರಿಗೆ ಕೊರೊನಾವೈರಸ್ ಸೋಂಕಿನ ತಪಾಸಣೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾಹಿತಿ ನೀಡಿದೆ.
ದೇಶದಲ್ಲಿ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 250 ದಿನಗಳಾಗಿದೆ. ದೇಶದಲ್ಲಿ ಈವರೆಗೂ 83,39,90,049 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ.