ಲಂಡನ್: ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದ್ದು, ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಅವರು ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ.
ಈ ಬಗ್ಗೆ ಸ್ವತಃ ಬಿಸಿಸಿಐ ಮೂಲಗಳು ಮಾಹಿತಿ ನೀಡಿದ್ದು, ಶನಿವಾರ ರವಿಶಾಸ್ತ್ರಿ ಅವರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ ಎಂದು ತಿಳಿದುಬಂದಿದೆ. ಅಲ್ಲದೆ ಅವರ ಸಂಪರ್ಕದಲ್ಲಿದ್ದ ಭಾರತೀಯ ತಂಡದ ಸಹಾಯಕ ಸಿಬ್ಬಂದಿಯ ಮೂವರನ್ನು ಪ್ರತ್ಯೇಕಿಸಲಾಗಿದೆ. ಈ ಮೂವರಲ್ಲಿ ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಮತ್ತು ಫಿಸಿಯೋಥೆರಪಿಸ್ಟ್ ನಿತಿನ್ ಪಟೇಲ್ ಸೇರಿದ್ದಾರೆ.
ಈ ಬಗ್ಗೆ ಬಿಸಿಸಿಐ ಕೂಡ ಟ್ವಿಟರ್ ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದು, ಬಿಸಿಸಿಐ ವೈದ್ಯಕೀಯ ತಂಡ ರವಿಶಾಸ್ತ್ರಿ, ಭರತ್ ಅರುಣ್, ಆರ್. ಶ್ರೀಧರ್ ಮತ್ತು ನಿತಿನ್ ಪಟೇಲ್ ಅವರನ್ನು ಮುನ್ನೆಚ್ಚರಿಕೆಯಾಗಿ ಪ್ರತ್ಯೇಕಿಸಲಾಗಿದೆ. ನಿನ್ನೆ ಸಂಜೆ ಶಾಸ್ತ್ರಿಯವರ ಫ್ಲೂ ಟೆಸ್ಟ್ ಪಾಸಿಟಿವ್ ಬಂದ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ನಾಲ್ವರ RT-PCR ಪರೀಕ್ಷೆಯನ್ನು ಮಾಡಲಾಗಿದೆ. ಈ ನಾಲ್ವರು ವೈದ್ಯಕೀಯ ತಂಡದ ದೃಢೀಕರಣವಿಲ್ಲದೆ ತಂಡದೊಂದಿಗೆ ಪ್ರಯಾಣಿಸುವಂತಿಲ್ಲ ಎಂದು ಹೇಳಿದೆ.
ಇತರೆ ಸದಸ್ಯರಿಗೂ ಪರೀಕ್ಷೆ
ಉಳಿದ ತಂಡದ ಸದಸ್ಯರ ಫ್ಲೂ ಟೆಸ್ಟ್ ಮಾಡಲಾಗಿದೆ ಎಂದು ಬಿಸಿಸಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಟೀಮ್ ಇಂಡಿಯಾದ ಉಳಿದ ಸದಸ್ಯರಿಗೆ ಎರಡು ಫ್ಲೂ ಪರೀಕ್ಷೆಗಳನ್ನು ಸಹ ಮಾಡಲಾಯಿತು.
ಇದನ್ನೂ ಓದಿ: ಭಾರತ- ಇಂಗ್ಲೆಂಡ್ ನಾಲ್ಕನೇ ಟೆಸ್ಟ್: ಐಸಿಸಿ ನಿಯಮ ಉಲ್ಲಂಘನೆಗಾಗಿ ರಾಹುಲ್ ಗೆ ಪಂದ್ಯ ಶುಲ್ಕದ ಶೇ. 15 ರಷ್ಟು ದಂಡ
ಓವಲ್‌ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಮೈದಾನಕ್ಕೆ ಹೋಗಲು ನೆಗೆಟಿವ್ ಬಂದಿರುವ ಸದಸ್ಯರಿಗೆ ಅನುಮತಿ ನೀಡಲಾಗಿದೆ. ಭಾರತ ತಂಡ ಪ್ರಸ್ತುತ ಇಂಗ್ಲೆಂಡ್ ವಿರುದ್ಧ ಓವಲ್ ಮೈದಾನದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯ ಆಡುತ್ತಿದೆ ಮತ್ತು ಇಂದು ಈ ಪಂದ್ಯದ ನಾಲ್ಕನೇ ದಿನವಾಗಿದೆ.