ಬದಿಯಡ್ಕ: ಕುಂಬ್ಡಾಜೆ ಪಂಚಾಯತಿಯ ಎ.ಪಿ ಸರ್ಕಲ್ -ಗೋಸಾಡ ರಸ್ತೆಯ ಶೋಚನೀಯ ಸ್ಥಿತಿಯನ್ನು ಪರಿಹರಿಸಬೇಕೆಂದು ಕುಂಬ್ಡಾಜೆ ಪಂಚಾಯತಿ ಅಭಿವೃದ್ದಿ ಸ್ಥಾಯೀ ಸಮಿತಿ ಅ|ಧ್ಯಕ್ಷ ಟಿ.ಎಂ.ಅಬ್ದುಲ್ ರಝಾಕ್ ಒತ್ತಾಯಿಸಿದ್ದಾರೆ. ಸುಮಾರು ಒಂದು ಸಾವಿರ ಕುಟುಂಬಗಳು ಅವಲಂಬಿಸಿರುವ ರಸ್ತೆಯಾಗಿರುವ ಇಲ್ಲಿ ಸಂಚಾರ ಸಂಕಷ್ಟಕರವಾಗಿದೆ. ಇದು ಗೋಸಾಡ ಮಹಿಷಮರ್ಧಿನಿ ದೇವಸ್ಥಾನ ಮತ್ತು ಶಾಂತಿಪಲ್ಲ ಇಲಿಯಾಸ್ ಮಸೀದಿಗೆ ಹೋಗುವ ರಸ್ತೆಯಾಗಿದೆ. ಸಾಮಾನ್ಯವಾಗಿ, ಪ್ರತಿದಿನ ನೂರಾರು ವಾಹನಗಳು ಈ ರಸ್ತೆಯ ಮೂಲಕ ಹಾದು ಹೋಗುತ್ತವೆ. ಮರಿಕ್ಕಾನ, ಪಾತೇರಿ, ಅನ್ನಡ್ಕ, ಚೆರೋಣಿ, ಗೋಸಾಡ ಮತ್ತು ಬೆಳಿಂಜ ಪ್ರದೇಶಗಳ ಜನರು ಆಶ್ರಯಿಸುವ ರಸ್ತೆಯು ಅಗಲ್ಪಾಡಿ ಪ್ರೌಢ ಶಾಲೆ ಮತ್ತು ನಾರಂಪಾಡಿ ಫಾತಿಮಾ ಶಾಲೆಗೆ ಹೋಗುವ ದಾರಿಯಾಗಿದೆ. ನಾರಂಪಾಡಿ ಸೇಂಟ್ ಜಾನ್ ಡಿ ಬಿರೀಟೊ ಚರ್ಚ್‍ಗೆ ಹೋಗಲು ಇರುವ ಏಕೈಕ ಮಾರ್ಗವಾಗಿದೆ.
ಈ ರಸ್ತೆಯ ಶೋಚನೀಯತೆಗೆ ಪರಿಹಾರ ಕಲ್ಪಿಸಲು ಕುಂಬ್ಡಾಜೆ ಪಂಚಾಯತಿ ಸ್ಥಾಯೀ ಸಮಿತಿ ಅ|ಧ್ಯಕ್ಷ ಟಿ.ಎಂ.ಅಬ್ದುಲ್ ರಝಾಕ್ ಅವರು ಕಾಸರಗೋಡು ಶಾಸಕ ಎನ್. ಎನ್.ಎ ನೆಲ್ಲಿಕುನ್ನು ಅವರಿಗೆ ಮನವಿ ಸಲ್ಲಿಸಿದರು. ಸಿ.ಪಿ.ಐ ಲೋಕಲ್ ಕಾರ್ಯದರ್ಶಿ ಪ್ರಕಾಶ್ ಕುಂಬ್ಡಾಜೆ, ರಮೇಶ ಗೋಸಾಡ ಜೊತೆಯಲ್ಲಿದ್ದರು. ಈ ಮೊದಲು ಇದೇ ರಸ್ತೆಯ ಅಭಿವೃದ್ದಿಗೆ ಒತ್ತಾಯಿಸಿ ಕೇರಳ ಲೋಕೋಪಯೋಗಿ ಮತ್ತು ಪ್ರವಾಸೋದ್ಯಮ ಸಚಿವ ಮೊಹಮ್ಮದ್ ರಿಯಾಸ್ ಅವರಿಗೆ ಮನವಿ ಸಲ್ಲದಿಸಲಾಗಿತ್ತು.