ಕೋಲ್ಕತ್ತ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿ ಆಂಧ್ರ ಪ್ರದೇಶಕ್ಕೆ ಅಪ್ಪಳಿಸಿದ್ದ ಗುಲಾಬ್ ಚಂಡಮಾರುತದ ಅಬ್ಬರ ಇದೀಗ ಕೊಂಚ ಕಡಿಮೆಯಾಗಿದ್ದು, ಚಂಡಮಾರುತವು ಪ್ರಸ್ತುತ ಪಶ್ಚಿಮ-ವಾಯುವ್ಯ ಭಾಗದತ್ತ ಮುಖ ಮಾಡಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ರಾತ್ರಿ ಒಡಿಶಾ-ಆಂಧ್ರಪ್ರದೇಶ ಗಡಿಭಾಗದಲ್ಲಿ ಗುಲಾಬ್ ಚಂಡಮಾರುತ ಅಪ್ಪಳಿಸಿತ್ತು. ಒಡಿಶಾದ ಗೋಪಾಲಪುರಂ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂನಲ್ಲಿ ಚಂಡಮಾರುತವು ಭೂ ಪ್ರವೇಶ ಮಾಡಿತ್ತು. ಚಂಡಮಾರುತದ ನೆಲಸ್ಪರ್ಶದ ನಂತರ ಎರಡೂ ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಒಡಿಶಾ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರವಾಹದ ಸ್ಥಿತಿ ಎದುರಿಸುವ ಅಪಾಯವಿದ್ದ ಪ್ರದೇಶಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ನೆಲಸ್ಪರ್ಶದ ವೇಳೆ ಗಾಳಿಯ ವೇಗವು 95 ಕಿ.ಮೀ.ನಷ್ಟಿತ್ತು. ಮೂರೂ ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಚಂಡಮಾರುತವು ಪ್ರಸ್ತುತ ಪಶ್ಚಿಮ-ವಾಯುವ್ಯ ಭಾಗದತ್ತ ಮುಖ ಮಾಡಿದ್ದು, ಬಳಿಕ ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಚಂಡಮಾರುತದ ಅಬ್ಬರ ಕಡಿಮೆಯಾಗಲಿದೆ. ಅಂತೆಯೇ ಮುಂದಿನ 8ರಿಂದ 10 ಗಂಟೆಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಚಂಡಮಾರುತದ ಪ್ರಭಾವವು ಕಡಿಮೆ ಇರಲಿದೆ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ 20,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.
ಆಂಧ್ರಪ್ರದೇಶದ 9 ಜಿಲ್ಲೆಗಳಲ್ಲಿ ಚಂಡಮಾರುತದ ಪ್ರಭಾವವು ತೀವ್ರವಾಗಿರಲಿದ್ದು, 85,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೂರ್ವ ಕರಾವಳಿ ರೈಲ್ವೆಯು 34 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.
ನೌಕಾಪಡೆ ಸನ್ನದ್ಧ:
ಚಂಡಮಾರುತದ ತುರ್ತು ಪರಿಸ್ಥಿತಿಯನ್ನು ಎದುರಿಸಲು ನೌಕಾಪಡೆಯ ಎರಡು ವಿಮಾನವಾಹಕ ನೌಕೆಗಳನ್ನು ಸಿದ್ಧವಾಗಿ ಇರಿಸಲಿದೆ. ಚೆನ್ನೈಗೆ ಸಮೀಪದಲ್ಲಿ ಐಎನ್‌ಎಸ್ ದೇಗಾ ಮತ್ತು ಐಎನ್‌ಎಸ್ ರಾಜಾಲಿ ನೌಕೆಗಳನ್ನು ಸಜ್ಜಾಗಿ ಇರಿಸಲಾಗಿದೆ. ತುರ್ತು ಸಂದರ್ಭವನ್ನು ಎದುರಿಸಲು ಮತ್ತು ಜನರನ್ನು ತೆರವು ಮಾಡಲು ಅನುಕೂಲವಾಗುವಂತೆ ಹೆಲಿಕಾಪ್ಟರ್‌ಗಳನ್ನು ಸಜ್ಜಾಗಿ ಇರಿಸಲಾಗಿದೆ. ಅಗತ್ಯ ವಸ್ತುಗಳನ್ನು ಪೂರೈಕೆ ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ನೌಕಾಪಡೆ ತಿಳಿಸಿದೆ.
ಮುಂದಿನ 48 ಗಂಟೆಗಳಲ್ಲಿ ಕೆಲ ಜಿಲ್ಲೆಗಳಲ್ಲಿ ಮಳೆ ಅಬ್ಬರ
ಬಂಗಾಳ ಕೊಲ್ಲಿಯಲ್ಲಿನ ಚಂಡ ಮಾರುತ ಪರಿಣಾಮ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿನ ಚಂಡ ಮಾರುತ ಹಾಗೂ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ವರದಿ ಹೇಳಿದೆ.