ನವದೆಹಲಿ: ಪಂಜಾಬ್ ನ ಮಾಜಿ ಸಿಎಂ ಅಮರಿಂದರ್ ಸಿಂಗ್ ಅವರು ದಿಢೀರ್ ಬೆಳವಣಿಗೆಯಲ್ಲಿ ಸೆ.29 ರಂದು ರಾತ್ರಿ ಅಮಿತ್ ಶಾ ಅವರ ನಿವಸಕ್ಕೆ ತೆರಳಿ ಚರ್ಚೆ ನಡೆಸಿದ್ದು ಬಿಜೆಪಿ-ಕಾಂಗ್ರೆಸ್ ನಡುವಿನ ವಾಕ್ಸಮರಕ್ಕೆ ಆಹಾರವಾಗಿದೆ.
ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬೆನ್ನಲ್ಲೆ ಪ್ರತಿಕ್ರಿಯೆ ನೀಡಿರುವ ಅಮರಿಂದರ್ ಸಿಂಗ್, "ಅಮಿತ್ ಶಾ ಜೊತೆ ರೈತರ ಪ್ರತಿಭಟನೆ ವಿಷಯವಾಗಿ ಚರ್ಚಿಸಿದೆ" ಎಂದು ತಿಳಿಸಿದ್ದಾರೆ
ಅಮರಿಂದರ್ ಸಿಂಗ್-ಅಮಿತ್ ಶಾ ಅವರ ಭೇಟಿಯ ಬಗ್ಗೆ ತೀವ್ರವಾಗಿ ಟೀಕೆ ಮಾಡಿರುವ ಕಾಂಗ್ರೆಸ್ ಪಕ್ಷ, "ಅಮರಿಂದರ್ ಸಿಂಗ್ ಅವರ ನಿವಾಸ ದಲಿತ ವಿರೋಧಿ ರಾಜಕಾರಣದ ಹೊಸ ಕೇಂದ್ರವಾಗಿದೆ" ಎಂದು ಹೇಳಿದೆ.
ಅಮರಿಂದರ್ ಸಿಂಗ್ ಅವರ ನಡೆಯ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ನ ವಕ್ತಾರ ರಣ್ದೀಪ್ ಸುರ್ಜೆವಾಲ ಪಂಜಾಬ್ ನ ಮುಖ್ಯಮಂತ್ರಿಯನ್ನಾಗಿ ದಲಿತರನ್ನು ನೇಮಕ ಮಾಡಿದಾಗಿನಿಂದಲೂ ಅಧಿಕಾರದಲ್ಲಿರುವವರ ಅಹಂಕಾರಕ್ಕೆ ಪೆಟ್ಟು ಬಿದ್ದಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.
ಇತ್ತ ಕಪಿಲ್ ಸಿಬಲ್ ಅವರ ಹೇಳಿಕೆಯ ಬಗ್ಗೆಯೂ ಕಾಂಗ್ರೆಸ್ ನ ವಕ್ತಾರರು ಕಟುವಾಗಿ ಟೀಕಿಸಿದ್ದು, " ದಲಿತನೋರ್ವನನ್ನು ಸಿಎಂ ಮಾಡಿದರೆ, "ಕಾಂಗ್ರೆಸ್ ನಲ್ಲಿ ನಿರ್ಧಾರವನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಬಂದಿದೆ, ದಲಿತರನ್ನು ಸಿಎಂ ಮಾಡಿದ್ದಕ್ಕಾಗಿ ಕೆಲವರ ಅಹಂಕಾರಕ್ಕೆ ಪೆಟ್ಟು ಬಿದ್ದಿದೆ" ಎಂದು ಹೇಳಿದ್ದಾರೆ.
ಕಾಂಗ್ರೆಸ್ ನಲ್ಲಿ ಗಾಂಧಿ ನಾಯಕತ್ವವನ್ನು ಪ್ರಶ್ನಿಸಿದ್ದ ಜಿ-23 ಗುಂಪಿನ ಪೈಕಿ ಕಪಿಲ್ ಸಿಬಲ್ ಕಾಂಗ್ರೆಸ್ ಗೆ ಚುನಾಯಿತ ಅಧ್ಯಕ್ಷರೇ ಇಲ್ಲ. ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂಬ ಅಂಶವನ್ನು ಮುಂದಿಟ್ಟಿದ್ದರು. ಈ ಬೆನ್ನಲ್ಲೇ ಈ ಬೆಳವಣಿಗೆಯೂ ಸಂಭವಿಸಿದ್ದು ಅಮರಿಂದರ್ ಸಿಂಗ್ ಅವರ ನಿವಾಸವನ್ನು ಕಾಂಗ್ರೆಸ್ ದಲಿತ ವಿರೋಧಿ ರಾಜಕಾರಣದ ಹೊಸ ಕೇಂದ್ರ ಎಂದು ಹೇಳಲು ಪ್ರಾರಂಭಿಸಿದೆ.
ಅಮಿತ್ ಶಾ ಹಾಗೂ ಮೋದಿ ಪಂಜಾಬ್ ನ ಪ್ರತೀಕಾರದ ಬೆಂಕಿಯಲ್ಲಿ ಸುಡುತ್ತಿದ್ದಾರೆ. ತಮ್ಮ ಬಂಡವಾಳ ಶಾಹಿ ಸ್ನೇಹಿತರ ಹಿತಾಸಕ್ತಿಗಳನ್ನು ಪೂರೈಕೆ ಮಾಡಲು ರೈತ ವಿರೋಧಿ ಕಾನೂನಿಗೆ ಅಡ್ಡಿಯಾಗುತ್ತಿರುವ ಪಂಜಾಬ್ ಮೇಲೆ ಸೇಡು ತೀರಿಸಿಕೊಳ್ಳಲು ಮೋದಿ- ಅಮಿತ್ ಶಾ ಬಯಸುತ್ತಿದ್ದಾರೆ ಎಂದು ಸುರ್ಜೆವಾಲ ಟ್ವೀಟ್ ಮಲಕ ಹೇಳಿದ್ದಾರೆ.