ಕಾಸರಗೋಡು: ಮುಸ್ಲಿಂಲೀಗ್ ಮುಖಂಡ, ಮಾಜಿ ಶಾಸಕ ಎಂ.ಸಿ ಕಮರುದ್ದೀನ್ ನಿರ್ದೇಶಕರಾಗಿರುವ ಫ್ಯಾಶನ್‍ಗೋಲ್ಡ್ ವಂಚನಾ ಪ್ರಕರಣಕ್ಕೆ ಸಂಬಂಧಿಸಿ ಠೇವಣಿದಾರರು ಮುಸ್ಲಿಂಲೀಗ್ ಜಿಲ್ಲಾ ಸಮಿತಿ ಕಚೇರಿಗೆ ಮುತ್ತಿಗೆ ನಡೆಸಿದರು. ಪಿಡಿಪಿ ಪಕ್ಷದ ನೇತೃತ್ವದಲ್ಲಿ ಧರಣಿ ನಡೆಯಿತು.
ಎಂ.ಸಿ ಕಮರುದ್ದೀನ್ ಅವರನ್ನು ಮುಸ್ಲಿಂಲೀಗಿನ ಯಾವುದೇ ಚಟುವಟಿಕೆಗಳಲ್ಲೂ ಪಾಲ್ಗೊಳ್ಳದಿರುವಂತೆ ತಡೆಯಲು ಪಕ್ಷದ ನೇತಾರರು ಮುಂದಾಗುವಂತೆ ಅಗ್ರಹಿಸಿ ಕಾಸರಗೋಡು ಹಳೇಬಸ್‍ನಿಲ್ದಾಣ ವಠಾರದಲ್ಲಿರುವ ಮುಸ್ಲಿಂಲೀಗ್ ಕಚೇರಿಗೆ ಮುತ್ತಿಗೆ ನಡೆಸಲಾಗಿತ್ತು. ಮಹಿಳೆಯರ ಸಹಿತ ನೂರಾರು ಮಂದಿಯನ್ನೊಳಗೊಂಡ ಪ್ರತಿಭಟನಾಕಾರರನ್ನು ಕಚೇರಿಗೆ ತೆರಳುವ ಮೊದಲೇ ಪೊಲೀಸರು ತಡೆಹಿಡಿದಿದ್ದರು. ಸುಬೈರ್ ಪಡ್ಪು, ಬಾಲಕೃಷ್ಣನ್, ಸೆಬಿನಾಮಹಮ್ಮದ್, ನಸೀಮಾ, ಯೂನುಸ್ ತಳಂಗರೆ, ಸುರೇಶ್ ಮುಂತಾದವರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ಅಹವಾಲು ಸ್ವೀಕಾರಕ್ಕಾಗಿ ಜಿಲ್ಲೆಗೆ ಭೇಟಿ ನೀಡಿದ್ದ ರಾಜ್ಯ ಪೊಲೀಸ್ ಮಹಾ ನಿದೇಶಕ ಅನಿಲ್ ಕಾಂತ್ ಅವರಿಗೆ ಫ್ಯಾಶನ್ಗೋಲ್ಡ್ ಠೇವಣಿದಾರರು ತಮ್ಮ ಹಣ ವಾಪಾಸುಮಾಡುವಂತೆ ಮನವಿ ಸಲ್ಲಿಸಿದರು.