ತಿರುವನಂತಪುರಂ: ಲಂಚ ಪ್ರಕರಣದಲ್ಲಿ ಸಿಲುಕಿರುವ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಅವರಿಗೆ ವಿಚಾರಣೆಗೆ ಹಾಜರಾಗಲು ನೋಟಿಸ್ ಕಳಿಸಲಾಗಿದೆ.
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡಿನ ಮಂಜೇಶ್ವರ ಕ್ಷೇತ್ರದಿಂದ ಕೆ ಸುರೇಂದ್ರನ್ ಸ್ಪರ್ಧಿಸಿದ್ದರು. ತಮ್ಮ ಎದುರಾಳಿಗಳಿಗೆ ನಾಮಪತ್ರ ಹಿಂತೆಗೆದುಕೊಳ್ಳಲು ಪ್ರಭಾವ ಬೀರಿ, ಲಂಚ ನೀಡಿದ ಆರೋಪ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಮೇಲಿದೆ. ಕಾಸರಗೋಡು ಪೊಲೀಸರು ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ವಿರುದ್ಧ ಚುನಾವಣಾ ಆಕ್ರಮ ಆರೋಪ ಕೇಳಿ ಬಂದಿದ್ದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ಕಾಸರಗೋಡು ಕೋರ್ಟ್ ಸಮ್ಮತಿ ನೀಡಿದೆ.
ಕೆ ಸುರೇಂದ್ರನ್ ವಿರುದ್ಧ ಸ್ಪರ್ಧಿಸಿದ್ದ ಸಿಪಿಐ (ಎಂ) ಅಭ್ಯರ್ಥಿ ವಿವಿ ರಮೇಶನ್ ಎಂಬುವರು ದೂರು ದಾಖಲಿಸಿದ್ದರು. ಈಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಸುರೇಂದ್ರನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಸೂಚಿಸಿತ್ತು.
ಕೆ ಸುರೇಂದ್ರನ್ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 171(ಬಿ) ಮತ್ತು (ಇ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಸ್ ಪಿ ಅಭ್ಯರ್ಥಿ ಕೆ ಸುಂದರ ಅವರು ಕೆ ಸುರೇಂದ್ರನ್ ಬಗ್ಗೆ ಆರೋಪ ಮಾಡಿ 2.5 ಲಕ್ಷ ರು ಹಾಗೂ ಸ್ಮಾರ್ಟ್ ಫೋನ್ ನೀಡಿ ನಾಮಪತ್ರ ಹಿಂಪಡೆಯಲು ಸೂಚಿಸಿದ್ದರು. ಒಂದು ವೇಳೆ ಕೆ ಸುರೇಂದ್ರನ್ ಗೆದ್ದಿದ್ದರೆ 15 ಲಕ್ಷ ರು, ಕರ್ನಾಟಕದಲ್ಲಿ ಒಂದು ಬಂಗಲೆ, ವೈನ್ ಸ್ಟೋರ್ ನೀಡುವ ಭರವಸೆ ಸಿಕ್ಕಿತ್ತು ಎಂದಿದ್ದಾರೆ.
2016 ರಲ್ಲಿ ಕೆ ಸುರೇಂದ್ರನ್ ಕೇವಲ 89 ಮತಗಳಿಂದ ಸೋಲು ಕಂಡಿದ್ದರು. ಈ ಬಾರಿ ಕೂಡಾ ಕಡಿಮೆ ಅಂತರದಲ್ಲಿ ಸೋಲು ಕಂಡಿದ್ದಾರೆ. ತಮ್ಮ ಹೆಸರಿಗೆ ಸಾಮ್ಯತೆ ಇರುವ ಇತರೆ ಸ್ಪರ್ಧಿಗಳಿಗೆ ಆಮಿಷವೊಡ್ಡಿ ಸ್ಪರ್ಧಾಕಣದಿಂದ ಹಿಂದೆ ಸರಿಯುವಂತೆ ಮಾಡಿದ್ದಾರೆ ಎಂದು ಇತರೆ ಪಕ್ಷಗಳು ಆರೋಪಿಸಿವೆ.
ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಕೆ ಸುಂದರಾ ಅವರು ನಾಮಪತ್ರ ಹಿಂಪಡೆಯಲು ಬೆದರಿಕೆ ಹಾಗೂ ಆಮಿಷವೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ರಮೇಶ್ ಎಂಬುವರು ದೂರು ದಾಖಲಿಸಿದ್ದರು. ಈ ಕುರಿತಂತೆ ಸುರೇಂದ್ರನ್‌ರನ್ನು ಪ್ರಶ್ನಿಸಲು ನೋಟಿಸ್ ನೀಡಲಾಗಿದ್ದು, ವಿಚಾರಣೆ ನಡೆಸಲು ಕ್ರೈಂ ಬ್ರ್ಯಾಂಚ್ ಮುಂದಾಗಿದೆ.
ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಎಕೆಎಂ ಅಶ್ರಫ್ ಅವರು ಸುರೇಂದ್ರನ್ ರನ್ನು 745 ಮತಗಳ ಅಂತರದಿಂದ 2021ರಲ್ಲಿ ಸೋಲಿಸಿದ್ದಾರೆ. ಜನತಿಪತ್ಯ ರಾಷ್ಟ್ರೀಯ ಪಕ್ಷ ಕೂಡಾ ಸುರೇಂದ್ರನ್ ವಿರುದ್ಧ ಆಮಿಷದ ಆರೋಪ ಮಾಡಿದೆ.
ಅತಿಯಾದ ಆತ್ಮವಿಶ್ವಾಸವೇ ಮುಳುವಾಯ್ತು:
ಅತಿಯಾದ ಆತ್ಮವಿಶ್ವಾಸವೇ ಮತ್ತೊಮ್ಮೆ ಕಡಿಮೆ ಅಂತರದಲ್ಲಿ ಸೋಲಲು ಕಾರಣವಾಗಿದೆ. ಮಂಜೇಶ್ವರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೇವಲ 89 ಮತಗಳ ಅಂತರದಿಂದ ಸುರೇಂದ್ರನ್ ಅವರು ಇದೇ ಕ್ಷೇತ್ರದಲ್ಲಿ ಸೋಲು ಕಂಡಿದ್ದರು. ಮುಸ್ಲಿಂ ಲೀಗ್ ಅಭ್ಯರ್ಥಿ ಪಿಬಿ ಅಬ್ದುಲ್ ರಜಾಕ್ ಅವರು 56,870 ಮತಗಳಿಸಿದ್ದರೆ, ಸುರೇಂದ್ರನ್ 56,781 ಮತ ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಬಹುಜನ ಸಮಾಜವಾದಿ ಪಕ್ಷದ ಅಭ್ಯರ್ಥಿ ಕೆ ಸುಂದರ 467 ಮತಗಳನ್ನು ಪಡೆದಿದ್ದರು. 2016ರಲ್ಲಿ ಸುರೇಂದ್ರನ್ ಸೋಲಿಗೆ ಪರೋಕ್ಷವಾಗಿ ಕಾರಣವಾಗಿದ್ದ ಸುಂದರ ಈ ಬಾರಿ ನಾಮಪತ್ರ ಹಿಂಪಡೆದುಕೊಂಡಿದ್ದಲ್ಲದೆ, ಎನ್ಡಿಎ ಅಭ್ಯರ್ಥಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದರು. ಹೀಗಾಗಿ, ಸುರೇಂದ್ರನ್ ಈ ಬಾರಿ ಕಾಸರಗೋಡಿನ ಮಂಜೇಶ್ವರದಲ್ಲಿ ಗೆಲುವು ಕನಸು ಕಂಡಿದ್ದರು.
ಸುರೇಂದ್ರನ್ ಅವರು ಶಬರಿಮಲೆ ಸಂಪ್ರದಾಯ, ಕಟ್ಟುಪಾಡುಗಳನ್ನು ಕಾಪಾಡಲು ನಡೆಸಿದ ಹೋರಾಟಕ್ಕೆ ಬೆಲೆ ಸಿಗಲಿಲ್ಲ. ಇದಲ್ಲದೆ ಮತ್ತೊಮ್ಡು ಕ್ಷೇತ್ರ ಪಥನಂತಿಟ್ಟದ ಕೊನ್ನಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಸುರೇಂದ್ರನ್ ಆ ಕ್ಷೇತ್ರದಲ್ಲೂ ಹಿನ್ನಡೆಯಾಗಿದೆ. ಸಿಪಿಐ(ಎಂ) ನ ಕೆ. ಯು ಜನೀಶ್ ಕುಮಾರ್ ಅವರಿಗೆ 4,128 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. ಯುಡಿಎಫ್ ಅಭ್ಯರ್ಥಿ ರಾಬಿನ್ ಪೀಟರ್ 2ನೇ ಸ್ಥಾನ ಹಾಗೂ ಸುರೇಂದ್ರನ್ 3ನೇ ಸ್ಥಾನಕ್ಕೆ ಕುಸಿದಿದ್ದರು.