ರಾಂಚಿ: ಮಾಡೆಲಿಂಗ್ ಫೋಟೊ ಶೂಟ್ ಮಾಡಿಸಿಕೊಳ್ಳುವವರು ಪಾರ್ಕು, ಐಶಾರಾಮಿ ಮನೆಗಳು, ಸ್ಟುಡಿಯೋ ಮತ್ತಿತರ ಕಡೆಗಳಿಗೆ ತೆರಳುತ್ತಾರೆ. ಆದರೆ ಇಲ್ಲೊಬ್ಬಳು ಹುಡುಗಿ ಸಾವಿರಾರು ಟನ್ ಗಳಷ್ಟು ಪ್ರಮಾಣದ ತಿಪ್ಪೆಯನ್ನು ಸುರಿಯಲಾದ ಜಾಗದಲ್ಲಿ, ತಿಪ್ಪೆ ರಾಶಿ ಮಧ್ಯ ಓಡಾಡುತ್ತಾ ಫೋಟೊ ಶೂಟ್ ಮಾಡಿಸಿಕೊಂಡಿದ್ದಾಳೆ.
ಆಕೆಯ ಈ ಫೋಟೊ ಶೂಟ್ ಗೆ ಜಗತ್ತಿನೆಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ಏಕೆಂದರೆ ಈ ಹುಡುಗಿ ಈ ಜಾಗದಲ್ಲಿ ಫೋಟೊ ಶೂಟ್ ಮಾಡಿಸಿಕೊಂಡಿದ್ದು ಕಸ ವಿಲೇವಾರಿ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು. ಅಂದ ಹಾಗೆ ಪ್ರಾಂಜಲ್ ಸುರಭಿ ಎನ್ನುವ ಹೆಸರಿನ ಈ ರೂಪದರ್ಶಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ.
ರಾಂಚಿಯ ಹೊರವಲಯದಲ್ಲಿ ನಗರದ ಕಸವೆಲ್ಲವನ್ನೂ ಸುರಿಯಲಾಗುತ್ತಿದೆ. ಸುತ್ತಮುತ್ತಲಿನವರು ಅದರಿಂದ ತೊಂದರೆ ಅನುಭವಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಫೋಟೊ ಸ್ಪರ್ಧೆಯಲ್ಲಿ ಆಯ್ಕೆಯಾಗಿರುವ 119 ದೇಶಗಳ 7000 ಫೋಟೋಗಳಲ್ಲಿ ಸುರಭಿಯ ಫೋಟೋ ಕೂಡಾ ಸೇರಿದೆ ಎನ್ನುವುದು ಸಂತಸದ ಸಂಗತಿ.