ಚಂಡೀಘಡ: ನವಜೋತ್ ಸಿಂಗ್ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ಅಪ್ತ ಸ್ನೇಹಿತರಾಗಿದ್ದು, ದೇಶದ ಭದ್ರತೆಗೆ ದೊಡ್ಡ ಅಪಾಯವಾಗಿದ್ದಾರೆ ಎಂದು ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಕ್ಯಾಪ್ಟನ್ ಅಮರೀಂದರ್ ಸಿಂಗ್ ಹೇಳಿದ್ದಾರೆ.
ರಾಜಿನಾಮೆ ಬೆನ್ನಲ್ಲೇ ಎಎನ್‌ಐ ಸುದ್ದಿಸಂಸ್ಥೆ ನಡೆಸಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅಮರೀಂದರ್ ಸಿಂಗ್ ಅವರು, ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದೊಂದಿಗೆ ಸಂಪರ್ಕದಲ್ಲಿದ್ದಾರೆ. ಪಕ್ಷವು ಅವರನ್ನು ಪಂಜಾಬ್ ಮುಖ್ಯಮಂತ್ರಿಯನ್ನಾಗಿಸುವ ಕ್ರಮಕ್ಕೆ ಮುಂದಾದರೆ ನಾನು ವಿರೋಧಿಸುತ್ತೇನೆ ಎಂದು ಹೇಳಿದ್ದಾರೆ.
'ಸಿಧು ಅವರನ್ನು ಮುಖ್ಯಮಂತ್ರಿಯನ್ನಾಗಿಸುವ ಯಾವುದೇ ನಡೆಯನ್ನು ದೇಶದ ಭದ್ರತೆಯ ದೃಷ್ಟಿಯಿಂದ ನಾನು ವಿರೋಧಿಸುತ್ತೇನೆ. ಹಾಗೆಯೇ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸಿಧು ʼಅಸಮರ್ಥʼ ಎಂದೂ ಅಮರೀಂದರ್ ಸಿಂಗ್ ಟೀಕಿಸಿದ್ದಾರೆ.
ʼನವಜೋತ್ ಸಿಂಗ್ ಸಿಧು ಅಸಮರ್ಥರಾಗಿದ್ದು, ಹಾನಿ ಸೃಷ್ಟಿಸಲಿದ್ದಾರೆ. ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ಸಿಧು ಹೆಸರನ್ನು ವಿರೋಧಿಸುತ್ತೇನೆ. ಅವರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದಾರೆ. ಇದು ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿ... ಸಿದ್ದುಗೆ ಪಾಕಿಸ್ತಾನ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಜೊತೆ ಸಂಬಂಧವಿದೆ. ದೇಶಕ್ಕಾಗಿ ಹಲವು ಯೋಧರು ಪ್ರಾಣತ್ಯಾಗ ಮಾಡಿದ್ದಾರೆ. ಪಾಕಿಸ್ತಾನದ ದಾಳಿಯಲ್ಲಿ ನಾನು ನೂರಾರು ಸೈನಿಕರನ್ನು ಕಳೆದುಕೊಂಡಿದ್ದೇವೆ. ಅವರ ಪ್ರಾಣ ತ್ಯಾಗ-ಬಲಿದಾನ ವ್ಯರ್ಥವಾಗಲು ಬಿಡಬಾರದು ಎಂದು ಹೇಳಿದರು.
ಆದಾಗ್ಯೂ, ಸಿಧು ಅವರನ್ನು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರಿಸಬೇಕೇ ಎಂಬುದನ್ನು ಪಕ್ಷವು ನಿರ್ಧರಿಸಲಿದೆ ಎಂದಿದ್ದಾರೆ.