ಚೆನ್ನೈ: ರಾಷ್ಟ್ರೀಯ ನಗದೀಕರಣ ಯೋಜನೆಯ ಮೂಲಕ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಪ್ರವೃತ್ತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಇಂತಹ ಕ್ರಮಗಳಿಗೆ ರಾಜ್ಯದ ವಿರೋಧವನ್ನು ಶೀಘ್ರವೇ ಪ್ರಧಾನಿ ನರೇಂದ್ರ ಮೋದಿಯವರಿಗೆ ತಿಳಿಸುವುದಾಗಿ ಹೇಳಿದ್ದಾರೆ.
ರಾಜ್ಯ ವಿಧಾನಸಭೆಯಲ್ಲಿ ನಡೆದ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ ಸ್ಟಾಲಿನ್, "ಸಾರ್ವಜನಿಕ ವಲಯದ ಸಂಸ್ಥೆಗಳು ಈ ದೇಶದ ಜನರ ಸ್ವತ್ತುಗಳಾಗಿವೆ. ಅವುಗಳು ಸಣ್ಣ ಮತ್ತು ಮಧ್ಯ ಕೈಗಾರಿಕೆಗಳಿಗೆ ಮೂಲಭೂತವಾಗಿ ಕಾರ್ಯನಿರ್ವಹಿಸುತ್ತವೆ. ಜನರ ಸೇವೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ವಲಯದ ಸಂಸ್ಥೆಗಳ ಖಾಸಗೀಕರಣಗೊಳಿಸುವುದು ಅಥವಾ ಗುತ್ತಿಗೆ ನೀಡುವುದು ದೇಶದ ಹಿತಕ್ಕ ಮಾರಕ. ಖಾಸಗೀಕರಣಕ್ಕೆ ರಾಜ್ಯ ಸರ್ಕಾರದ ವಿರೋಧವನ್ನು ನಾನು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರದ ಮೂಲಕ ತಿಳಿಸುತ್ತೇನೆ ಎಂದು ಹೇಳಿದ್ದಾರೆ.
ಶೂನ್ಯ ವೇಳೆಯಲ್ಲಿ ಕೆ ಸೆಲ್ವಪೆರುಂತಗೈ(ಕಾಂಗ್ರೆಸ್) ಮತ್ತು ಟಿ ರಾಮಚಂದ್ರನ್(ಸಿಪಿಐ) ಅವರು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕಾ ಸಚಿವ ತಂಗಂ ತೆನ್ನರಸು, "ಇಂತಹ ಸಮಸ್ಯೆಗಳ ಕುರಿತು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರವನ್ನು ಸಂಪರ್ಕಿಸಬೇಕು. ಏಕೆಂದರೆ ಇವುಗಳನ್ನು ರಚಿಸಲು ಅಗತ್ಯವಾದ ಭೂಮಿಯನ್ನು ಮಂಜೂರು ಮಾಡಿದೆ. ಸಾರ್ವಜನಿಕ ಸ್ವತ್ತುಗಳು. ಉದಾಹರಣೆಗೆ, ಸೇಲಂ ಸ್ಟೀಲ್ ಪ್ಲಾಂಟ್ ಸ್ಥಾಪಿಸಲು ತಮಿಳುನಾಡು ಸರ್ಕಾರವು ಭಾರೀ ಪ್ರಮಾಣದ ಭೂಮಿಯನ್ನು ನೀಡಿದೆ. ಲಾಭ ಗಳಿಸುವ ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಕೂಡ ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದರೆ ಡಿಎಂಕೆ ಸರ್ಕಾರ ಅದನ್ನು ವಿರೋಧಿಸುತ್ತದೆ ಎಂದರು.