ನವದೆಹಲಿ: ವಕೀಲಿ ವೃತ್ತಿಯು ಮಹಿಳೆಯರನ್ನು ಇನ್ನೂ ಅಷ್ಟಾಗಿ ಒಳಗೊಂಡಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅಭಿಪ್ರಾಯಪಟ್ಟಿದ್ದಾರೆ.
'ಈಗಾಗಲೇ ಇರುವವರ ಪೈಕಿ ಹೆಚ್ಚಿನವರು ತಮ್ಮ ವೃತ್ತಿಯೊಳಗೆ ಹೋರಾಟ ನಡೆಸುತ್ತಿದ್ದಾರೆ. ಕೆಲವೇ ಕೆಲವರು ಉನ್ನತ ಸ್ಥಾನವನ್ನು ಪ್ರತಿನಿಧಿಸಿದ್ದಾರೆ. ಆದರೂ, ಅವರು ಇನ್ನೂ ಗಮನಾರ್ಹ ಸವಾಲುಗಳನ್ನು ಎದುರಿಸುತ್ತಲೇ ಇದ್ದಾರೆ' ಎಂದಿದ್ದಾರೆ.
'ಸ್ವಾತಂತ್ರ್ಯ ಬಂದ 75 ವರ್ಷಗಳಲ್ಲಿ ಎಲ್ಲ ಹಂತಗಳಲ್ಲೂ ಶೇ 50ರಷ್ಟು ಮಹಿಳಾ ಪ್ರಾಧಿನಿಧ್ಯ ಇರಬೇಕು ಎಂಬುದು ಎಲ್ಲರ ನಿರೀಕ್ಷೆ. ಆದರೆ, ಬಹಳ ಕಷ್ಟದಿಂದ ಸುಪ್ರೀಂ ಕೋರ್ಟ್ ಪೀಠಗಳಲ್ಲಿ ಶೇ 11ರಷ್ಟು ಮಹಿಳಾ ಪ್ರಾತಿನಿಧ್ಯವನ್ನು ಮಾತ್ರ ಸಾಧಿಸಲಾಗಿದೆ ಎಂಬುದು ವಾಸ್ತವ. ಮೀಸಲಾತಿ ನೀತಿಯ ಕಾರಣ ಕೆಲವು ರಾಜ್ಯಗಳಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕಂಡುಬಂದಿದ್ದರೂ, ಕಾನೂನು ವೃತ್ತಿಯು ಮಹಿಳೆಯರನ್ನು ಇನ್ನಷ್ಟು ಒಳಗೊಳ್ಳಬೇಕು ಎಂಬುದಂತೂ ವಾಸ್ತವ' ಎಂದು ಸಿಜೆಐ ಹೇಳಿದ್ದಾರೆ.
ಮೂಲಸೌಕರ್ಯ, ಆಡಳಿತಾತ್ಮಕ ಸಿಬ್ಬಂದಿ ಕೊರತೆ ಮತ್ತು ಖಾಲಿ ಇರುವ ನ್ಯಾಯಾಧೀಶರ ಹುದ್ದೆಗಳು... ಹೀಗೆ ಕಷ್ಟಕರ ಸವಾಲುಗಳನ್ನು ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿದ್ದು, ಕಾಲಮಿತಿಯೊಳಗೆ ಮೂಲಸೌಕರ್ಯ ವಿಚಾರದ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ರಮಣ ಅವರು ಭರವಸೆ ನೀಡಿದರು.
'ರಾಷ್ಟ್ರೀಯ ನ್ಯಾಯಾಂಗ ಮೂಲಸೌಕರ್ಯ ನಿಗಮ ರಚಿಸುವ ಪ್ರಸ್ತಾವನೆ ಸಿದ್ಧತೆಯ ಹಂತದಲ್ಲಿದೆ. ನಾವು ದೇಶಾದ್ಯಂತದ ವಸ್ತುಸ್ಥಿತಿ ವರದಿ ಸಂಗ್ರಹಿಸಿದ್ದೇವೆ. ಈ ಕುರಿತ ಪ್ರಸ್ತಾವನೆಯು ಕಾನೂನು ಸಚಿವರಿಗೆ ಶೀಘ್ರವೇ ರವಾನೆಯಾಗಲಿದೆ. ಸರ್ಕಾರದಿಂದ ಸಂಪೂರ್ಣ ಸಹಕಾರ ಸಿಗುವ ನಿರೀಕ್ಷೆಯಿದೆ' ಎಂದು ಅವರು ಹೇಳಿದ್ದಾರೆ.
ಬಾರ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಿಜೆಐ ಮಾತನಾಡಿದರು. ಸಚಿವ ಕಿರಣ್ ರಿಜಿಜು ಹಾಗೂ ಉನ್ನತ ನ್ಯಾಯಾಲಯಗಳ ಹಿರಿಯ ನ್ಯಾಯಾಧೀಶರು ಇದ್ದರು. ಮೂವರು ಮಹಿಳಾ ನ್ಯಾಯಮೂರ್ತಿಗಳು ಸೇರಿದಂತೆ 9 ನ್ಯಾಯಮೂರ್ತಿಗಳ ನೇಮಕಕ್ಕೆ ದಾಖಲೆಯ ಸಮಯದಲ್ಲಿ ಅನುಮೋದನೆ ನೀಡಿದ ಪ್ರಧಾನಿಗೆ ಧನ್ಯವಾದ ಹೇಳಿದರು. ಮುಂದಿನ ಒಂದು ತಿಂಗಳಲ್ಲಿ ಹೈಕೋರ್ಟ್‌ಗಳಲ್ಲಿ ಶೇ 90ರಷ್ಟು ಹುದ್ದೆಗಳನ್ನು ಭರ್ತಿ ಮಾಡುವ ಆಶಯ ವ್ಯಕ್ತಪಡಿಸಿದರು.
ತಾವು ಅಧಿಕಾರ ವಹಿಸಿಕೊಂಡ ನಂತರ ವಿವಿಧ ಹೈಕೋರ್ಟ್‌ಗಳ ನೇಮಕಕ್ಕೆ 82 ಹೆಸರುಗಳನ್ನು ಕಳುಹಿಸಲಾಗಿದೆ ಎಂದು ಸಿಜೆಐ ರಮಣ ಹೇಳಿದರು. ಒಂದು ವಾರದಲ್ಲಿ ಸುಪ್ರೀಂ ಕೋರ್ಟ್‌ಗೆ 9 ನ್ಯಾಯಮೂರ್ತಿಗಳ ಹೆಸರುಗಳನ್ನು ಅಂತಿಮಗೊಳಿಸಿದ ರೀತಿಯಲ್ಲೇ, ಹೈಕೋರ್ಟ್‌ಗಳಿಗೂ ಸರ್ಕಾರ ಶೀಘ್ರವಾಗಿ ನೇಮಕಾತಿ ಮಾಡಬೇಕು ಎಂದು ಅವರು ಆಶಿಸಿದರು.
*
ಎಲ್ಲಾ ಹೈಕೋರ್ಟ್‌ಗಳಲ್ಲಿ ಸುಮಾರು ಶೇ 41ರಷ್ಟು ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಕಠಿಣ ಸವಾಲು ನಮ್ಮೆದುರು ಇದೆ.
-ಎನ್.ವಿ. ರಮಣ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ
**
ಅಂಕಿಅಂಶ
465: 25 ಹೈಕೋರ್ಟ್‌ಗಳಲ್ಲಿ ಖಾಲಿಯಿರುವ ಹುದ್ದೆಗಳು
1098: ಒಟ್ಟು ನ್ಯಾಯಾಧೀಶರ ಸಂಖ್ಯೆ