ಜೈಪುರ: ರಾಜಸ್ಥಾನದ ಸರಕಾರಿ ಶಾಲೆಗಳಿಗೆ ಶಿಕ್ಷಕರನ್ನು ಆಯ್ಕೆ ಮಾಡುವ ಪ್ರಮುಖ ಪರೀಕ್ಷೆಯಲ್ಲಿ ನಕಲು ಮಾಡಲು ಯತ್ನಿಸಿದ ಐವರನ್ನು ಬಂಧಿಸಲಾಗಿದೆ. ಅಭ್ಯರ್ಥಿಗಳು ಬ್ಲೂಟೂತ್ ಸಾಧನಗಳನ್ನು ಒಳಭಾಗದಲ್ಲಿ ಅಳವಡಿಸಲಾಗಿದ್ದ 'ಚಪ್ಪಲ್' ಗಳನ್ನು ಧರಿಸಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆಂದು NDTV ವರದಿ ಮಾಡಿದೆ.
ಅಜ್ಮೇರ್‌ನಲ್ಲಿ ವ್ಯಕ್ತಿಯೊಬ್ಬ ವಂಚಿಸಿ ಸಿಕ್ಕಿಬಿದ್ದ ನಂತರ ರಾಜ್ಯಾದ್ಯಂತ ವಂಚನೆಯ ಜಾಲ ಹರಡಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಬಿಕನೇರ್ ಹಾಗೂ ಸಿಕಾರ್ ಜಿಲ್ಲೆಯಲ್ಲಿ ಬ್ಲೂಟೂತ್ ಹಾಗೂ ಮೊಬೈಲ್ ಸಾಧನಗಳೊಂದಿಗೆ ಇದೇ ರೀತಿಯ ಚಪ್ಪಲ್‌ಗಳು ಕಂಡುಬಂದಿವೆ ಎನ್ನಲಾಗಿದೆ.
ಶಿಕ್ಷಕರ ನೇಮಕಾತಿಗಾಗಿ ರವಿವಾರ ಅತ್ಯಂತ ಸ್ಪರ್ಧಾತ್ಮಕ ರಾಜಸ್ಥಾನ ಅರ್ಹತಾ ಪರೀಕ್ಷೆಯನ್ನು (ರೀಟ್) ನಡೆಸಲಾಗುತ್ತಿದ್ದು, ಪರೀಕ್ಷೆಯಲ್ಲಿ ಮೋಸವಾಗುವುದನ್ನು ತಡೆಯಲು ರಾಜಸ್ಥಾನದ ಹಲವು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಹಾಗೂ ಎಸ್‌ಎಂಎಸ್ ಅನ್ನು ಇಂದು 12 ಗಂಟೆಗಳ ಕಾಲ ಸ್ಥಗಿತಗೊಳಿಸಲಾಗಿತ್ತು. ಸರಕಾರಿ ಶಾಲೆಗಳಲ್ಲಿ 31,000 ಹುದ್ದೆಗಳಿಗೆ ಸುಮಾರು 16 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಗೆ ಹಾಜರಾಗಿದ್ದರು.
ಒಬ್ಬ ವ್ಯಕ್ತಿಯು ಪರೀಕ್ಷೆಯಲ್ಲಿ ನಕಲು ಮಾಡಲು ತನ್ನ ಚಪ್ಪಲಿಯಲ್ಲಿ ಸಾಧನಗಳನ್ನು ಹೊಂದಿದ್ದನ್ನು ನಾವು ಪತ್ತೆ ಹಚ್ಚಿದೆವು. ಪರೀಕ್ಷೆಯ ಆರಂಭದಲ್ಲಿ ನಾವು ಆತನನ್ನು ಸೆರೆ ಹಿಡಿದಿದ್ದೆವು. ಆತನಿಗೆ ಎಲ್ಲಿ ನಂಟುಗಳಿವೆ ಹಾಗೂ ಯಾರೆಲ್ಲಾ ಭಾಗಿಯಾಗಿದ್ದಾರೆ ಎಂಬುದನ್ನು ನಾವು ಪತ್ತೆ ಹಚ್ಚುತ್ತಿದ್ದೇವೆ. ನಾವು ತಕ್ಷಣ ಇತರ ಜಿಲ್ಲೆಗಳನ್ನೂ ಎಚ್ಚರಿಸಿದೆವು. ಪರೀಕ್ಷೆಯ ಮುಂದಿನ ಹಂತದಲ್ಲಿ, ಚಪ್ಪಲಿ, ಶೂ ಅಥವಾ ಸಾಕ್ಸ್‌ಗಳೊಂದಿಗೆ ಯಾರೂ ಪರೀಕ್ಷಾ ಕೇಂದ್ರಕ್ಕೆ ಹೋಗಲು ಸಾಧ್ಯವಿಲ್ಲ ಎಂದು ಅಜ್ಮೇರ್ ಪೊಲೀಸ್ ಅಧಿಕಾರಿ ಜಗದೀಶ್ ಚಂದ್ರ ಶರ್ಮಾ ಹೇಳಿದರು.
"ಚಪ್ಪಲ್ ಒಳಗೆ ಸಂಪೂರ್ಣ ಫೋನ್ ಹಾಗೂ ಬ್ಲೂಟೂತ್ ಸಾಧನವಿದೆ. ಅಭ್ಯರ್ಥಿಯ ಕಿವಿಯೊಳಗೆ ಒಂದು ಸಾಧನವಿತ್ತು ಹಾಗೂ ಪರೀಕ್ಷಾ ಸಭಾಂಗಣದ ಹೊರಗಿನಿಂದ ಯಾರೋ ಒಬ್ಬರು ನಕಲು ಮಾಡಲು ಸಹಾಯ ಮಾಡುತ್ತಿದ್ದರು" ಎಂದು ಪೊಲೀಸ್ ಅಧಿಕಾರಿ ರತನ್ ಲಾಲ್ ಭಾರ್ಗವ್ ಹೇಳಿದರು.
ಪೊಲೀಸರು ಇನ್ನೂ ವಿಸ್ತಾರವಾದ ವಂಚನೆಯ ಸಂಚನ್ನು ಬಿಚ್ಚಿಡುತ್ತಿದ್ದಾರೆ, ಇದು ಒಂದು ಸಣ್ಣ-ಪ್ರಮಾಣದ ಉದ್ಯಮವಾಗಿ ಕಾಣುತ್ತದೆ. 'ಚೀಟಿಂಗ್ ಚಪ್ಪಲ್‌ಗಳನ್ನು' 'ಜಾಣ್ಮೆಯಿಂದ ತಯಾರಿಸಲ್ಪಟ್ಟವು' ಹಾರ್ಡ್‌ವೇರ್ ಹೊಂದಿರುವ ಚಪ್ಪಲ್ ಗಳನ್ನು ವಂಚನೆಗಾಗಿ 2 ಲಕ್ಷ ರೂ.ಗೆ ಮಾರಾಟ ಮಾಡಿರಬಹುದು ಎಂದು ಮೂಲಗಳು ತಿಳಿಸಿವೆ.