ನವದೆಹಲಿ: ಮೋದಿ ಸರ್ಕಾರದ ಲಸಿಕೆ ಆಂದೋಲನದ ಕುರಿತು ನೀಡಿರುವ ತಮ್ಮ ಬೇಜವಾಬ್ದಾರಿಯುತ ಹೇಳಿಕೆಗಳ ಬಗ್ಗೆ ಪ್ರತಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಸೋಮವಾರ ಹೇಳಿದರು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ಏಮ್ಸ್) ಲಸಿಕೆ ಕೇಂದ್ರಕ್ಕೆ ಭೇಟಿ ನೀಡಿದ ಅವರು, ಲಸಿಕಾ ಆಂದೋಲನವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ, ರಾಜ್ಯಗಳ ಆರೋಗ್ಯ ಸಚಿವರು, ವೈದ್ಯಕೀಯ ಸಿಬ್ಬಂದಿ ಮತ್ತು ಜನರಿಗೆ ಅಭಿನಂದನೆ ಮತ್ತು ಧನ್ಯವಾದಗಳನ್ನು ಸಲ್ಲಿಸಿದರು.
ಮೋದಿ ಅವರ ಜನ್ಮದಿನದಂದು 2.5 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಇದು ವಿಶ್ವದಾಖಲೆ ಆಗಿದೆ. ವಿಶ್ವದಲ್ಲೇ ಇದು' ಅತಿ ದೊಡ್ಡ ಮತ್ತು ತ್ವರಿತ' ಆಂದೋಲನ ಎಂಬುದನ್ನು ಸಾಬೀತುಪಡಿಸಿದೆ ಎಂದರು.
ದಾಖಲೆ ಪ್ರಮಾಣದ ಲಸಿಕೆ ನೀಡಿಕೆ ಮತ್ತು ಲಸಿಕೆ ಆಂದೋಲನದ ಬಗ್ಗೆ ಮೌನ ವಹಿಸಿರುವುದು ಮತ್ತು ಒಂದು ವರ್ಷದಿಂದ ನೀಡಿರುವ ಬೇಜವಾಬ್ದಾರಿಯುತ ಹೇಳಿಕೆಗಳ ಕುರಿತು ಪ್ರತಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಈ ವರ್ಷ ಲಸಿಕೆ ಆಂದೋಲನ ಆರಂಭವಾದ ಬಳಿಕ ನಡ್ಡಾ ಅವರು ಎರಡನೇ ಬಾರಿಗೆ ಏಮ್ಸ್‌ನ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಲಸಿಕೆ ಹಾಕಿಸಿಕೊಳ್ಳಲು ಕೇಂದ್ರಕ್ಕೆ ಬಂದಿದ್ದ ಜನರ ಜತೆ ಅವರು ಮಾತುಕತೆ ನಡೆಸಿದರು.
ಮೋದಿ ಅವರ ಜನ್ಮದಿನದಂದು ಚಾಲನೆ ನೀಡಿದ 'ಸೇವೆ ಮತ್ತು ಸಂಪೂರ್ಣ ಅಭಿಯಾನ'ದ ಭಾಗವಾಗಿ ಅವರು ಈ ಕೇಂದ್ರಕ್ಕೆ ಭೇಟಿ ನೀಡಿದರು.