ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಜೊತೆಗೆ ಅಪ್ಘಾನಿಸ್ತಾನ ಪರಿಸ್ಥಿತಿ ಕುರಿತು ದೂರವಾಣಿ ಮೂಲಕ ಚರ್ಚಿಸಿದ್ದು, ಭಾರತ- ಯುರೋಪಿಯನ್ ಸಂಬಂಧ ಮತ್ತಷ್ಟು ಬಲವರ್ದನೆಗೆ ಭಾರತದ ಬದ್ಧತೆಗೆ ಪುನರುಚ್ಚರಿಸಿದ್ದಾರೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಪ್ರಧಾನಿ, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷರ ಜೊತೆಗೆ ಅಪ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತಂತೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಉಭಯ ದೇಶಗಳ ಮುಖಂಡರು ಚರ್ಚಿಸಿದ್ದು, ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಪೈಶಾಚಿಕ ದಾಳಿಯನ್ನು ಖಂಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಸುರಕ್ಷತೆ ಮತ್ತು ಸ್ಥಿರತೆಯ ಪ್ರಾಮುಖ್ಯತೆಯನ್ನು ಉಭಯ ನಾಯಕರು ಪ್ರತಿಪಾದಿಸಿದ್ದು, ಈ ನಿಟ್ಟಿನಲ್ಲಿ ಭಾರತ ಹಾಗೂ ಯುರೋಪಿಯನ್ ಕೌನ್ಸಿಲ್ ಪಾತ್ರದ ಕುರಿತಂತೆ ಚರ್ಚೆ ನಡೆಸಿದ್ದಾರೆ. ದ್ವಿಪಕ್ಷೀಯ ಮತ್ತು ಜಾಗತಿಕ ವಿಚಾರಗಳು ಅದರಲ್ಲೂ ಅಫ್ಘಾನಿಸ್ತಾನದಲ್ಲಿನ ಪರಿಸ್ಥಿತಿ ಕುರಿತಂತೆ ನಿಕಟ ಸಂಪರ್ಕದಲ್ಲಿರುವ ಉಭಯ ನಾಯಕರು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.