ನವದೆಹಲಿ: ಕೋವಿಡ್-19 ಸೋಂಕಿನ ವಿರುದ್ಧ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಲಸಿಕೆಗಳ ಉತ್ಪಾದನೆ ವೇಗ ಪಡೆದುಕೊಂಡಿರುವುದರಿಂದ ದೇಶವು ಫೈಜರ್, ಮೊಡೆರ್ನಾ ಲಸಿಕೆಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆ ವಿರಳವಾಗಿದೆ ಎಂದು ಮೂಲಗಳು ಹೇಳಿವೆ.
ದೇಶದಲ್ಲಿ ಈವರೆಗೆ 83 ಕೋಟಿಗೂ ಹೆಚ್ಚು ಡೋಸ್ ಲಸಿಕೆ ನೀಡಲಾಗಿದೆ.
ಪ್ರತಿಕೂಲ ಪರಿಣಾಮಗಳ ಸಂದರ್ಭದಲ್ಲಿ ಹೊಣೆಗಾರಿಕೆಗೆ ಸಂಬಂಧಿಸಿ ಅಮೆರಿಕದ ಔಷಧ ಕಂಪನಿಗಳ ಬೇಡಿಕೆಗಳನ್ನು ಈಡೇರಿಸಲು ಭಾರತ ಸಿದ್ಧವಿಲ್ಲ ಎನ್ನಲಾಗಿದೆ. ಆದರೆ, ಈ ಕುರಿತು ಸರ್ಕಾರದಿಂದ ಅಧಿಕೃತ ಮಾಹಿತಿ ಈವರೆಗೆ ಹೊರಬಿದ್ದಿಲ್ಲ.
ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸದ್ಯ ತಿಂಗಳಿಗೆ 20 ಕೋಟಿಗೂ ಹೆಚ್ಚು ಡೋಸ್ ಕೋವಿಶೀಲ್ಡ್ ಲಸಿಕೆ ಉತ್ಪಾದಿಸುತ್ತಿದೆ. ಅಕ್ಟೋಬರ್ ವೇಳೆಗೆ ತಿಂಗಳಿಗೆ 22 ಕೋಟಿ ಡೋಸ್ ಪೂರೈಸುವುದಾಗಿ ಕಂಪನಿಯು ಸರ್ಕಾರಕ್ಕೆ ತಿಳಿಸಿದೆ.
ಭಾರತ್ ಬಯೋಟೆಕ್ ಸದ್ಯ ತಿಂಗಳಿಗೆ 3 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಉತ್ಪಾದಿಸುತ್ತಿದ್ದು, ಅಕ್ಟೋಬರ್ ವೇಳೆಗೆ 5 ಕೋಟಿಗೆ ಹೆಚ್ಚಿಸುವುದಾಗಿ ಹೇಳಿಕೊಂಡಿದೆ.
'ಲಸಿಕಾ ಅಭಿಯಾನದ ಆರಂಭಿಕ ದಿನಗಳಲ್ಲಿ ಹೆಚ್ಚು ಡೋಸ್‌ಗಳ ಅವಶ್ಯಕತೆ ಇತ್ತು. ದೇಶೀಯ ಉತ್ಪಾದನೆಯನ್ನು ಹೆಚ್ಚಿಸುವುದರೊಂದಿಗೆ ಇದನ್ನು ಪೂರೈಸಲಾಗುತ್ತಿದೆ. ದೇಶೀಯವಾಗಿ ಉತ್ಪಾದಿಸುವ ಈ ಲಸಿಕೆಗಳು ಕೈಗೆಟಕುವ ಬೆಲೆಯಲ್ಲಿ ಲಭ್ಯವಿವೆಯಲ್ಲದೆ, ಇವುಗಳ ಸಂಗ್ರಹಕ್ಕೆ ವಿಶೇಷ ವ್ಯವಸ್ಥೆ ಬೇಕಿಲ್ಲ' ಎಂದು ಮೂಲಗಳು ಹೇಳಿವೆ.