ನವದೆಹಲಿ: ದೆಹಲಿ ವಿಧಾನಸಭಾ ಕಟ್ಟಡದಲ್ಲಿ ಪತ್ತೆಯಾಗಿರುವ ಕೆಂಪು ಕೋಟೆಯನ್ನು ಸಂಪರ್ಕಿಸುವ ಗುಪ್ತ ಸುರಂಗ ಮಾರ್ಗದ ರಹಸ್ಯ ಬೇಧಿಸಲು ವೈಜ್ಞಾನಿಕ ಸಂಶೋಧನೆಯ ಅಗತ್ಯವಿದೆ ಎಂದು ಇತಿಹಾಸ ತಜ್ಞರು ಮತ್ತು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
2016ರಲ್ಲಿ ಮೊದಲ ಬಾರಿಗೆ ವರದಿಯಾಗಿರುವ ಈ ಗುಪ್ತ ಸುರಂಗವು ಈಗ ಮತ್ತೆ ಮುನ್ನೆಲೆಗೆ ಬಂದಿದ್ದು, ತೀವ್ರ ಕುತೂಹಲವನ್ನು ಕೆರಳಿಸಿದೆ.
ಪುರಾತತ್ವಶಾಸ್ತ್ರದ ದೃಷ್ಟಿಕೋನದಿಂದ ಸುರಂಗ ಮಾರ್ಗದ ರಚನೆಯ ಬಗ್ಗೆ ವೈಜ್ಞಾನಿಕ ಶೋಧನೆ ಮಾಡದಿರುವ ಹೊರತಾಗಿ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಭೂಗತ ಸುರಂಗ ಮಾರ್ಗದ ಮುಂಭಾಗವು ದೆಹಲಿ ವಿಧಾನಸಭಾ ಕಟ್ಟಡದ (ಹಳೆಯ ಸೆಕ್ರೆಟರಿಯೇಟ್) ಅಸೆಂಬ್ಲಿ ಹಾಲ್‌ನಲ್ಲಿದೆ.
1912ನೇ ಇಸವಿಯಲ್ಲಿ ಬ್ರಿಟಿಷರು ಈ ಸುರಂಗ ಮಾರ್ಗವನ್ನು ನಿರ್ಮಿಸಿದ್ದರು ಎನ್ನಲಾಗಿದೆ. ಬ್ರಿಟಿಷರು ಕೋಲ್ಕತ್ತಾದಿಂದ ದೆಹಲಿಗೆ ರಾಜಧಾನಿಯನ್ನು ಸ್ಥಳಾಂತರಿಸಿದಾಗ ಕೇಂದ್ರ ಶಾಸಕಾಂಗ ಸಭೆಯಾಗಿ ಬಳಸಲಾಗುತ್ತಿದ್ದ ಈ ಕಟ್ಟಡವನ್ನು 1926ರಲ್ಲಿ ನ್ಯಾಯಾಲಯವಾಗಿ ಪರಿವರ್ತಿಸಲಾಯಿತು. ಈ ಸುರಂಗ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿತ್ತು.
ಇತಿಹಾಸದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಈ ಐತಿಹಾಸಿಕ ಕಟ್ಟಡವನ್ನು ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸೂಚಕ ಕೇಂದ್ರವಾಗಿ ಬದಲಾಯಿಸುವ ಯೋಜನೆಯಿದ್ದು, ಮುಂದಿನ ವರ್ಷ ಸಾರ್ವಜನಿಕರಿಗಾಗಿ ತೆರೆದುಕೊಳ್ಳುವ ಇರಾದೆಯನ್ನು ಹೊಂದಿದ್ದೇವೆ ಎಂದು ದೆಹಲಿ ವಿಧಾನಸಭಾ ಸ್ಪೀಕರ್ ರಾಮ್ ನಿವಾಸ್ ಗೋಯಲ್ ತಿಳಿಸಿದ್ದಾರೆ.