ಮಂಜೇಶ್ವರ: ಮಂಗಳೂರು ವಿಶ್ವವಿದ್ಯಾನಿಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಸಂಶೋಧನಾ ವಿದ್ಯಾರ್ಥಿ ಅಕ್ಷಯಕುಮಾರ್ ಎಲಿಯಾಣ ಅವರು 2020-21ನೇ ಸಾಲಿನ ಬ್ರಿಟಿಷ್ ಕೌನ್ಸಿಲ್ ಹಾಗೂ ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರತಿಷ್ಠಿತ ನ್ಯೂಟನ್ ಭಾಭಾ ಸಂಶೋಧನಾ ಫೆಲೋಶಿಫ್ ಗೆ ಆಯ್ಕೆಯಾಗಿದ್ದಾರೆ.
ಅಕ್ಷಯಕುಮಾರ್ ಅವರು ವಿಶ್ವವಿದ್ಯಾನಿಲಯದ ಎಲೆಕ್ಟ್ರಾನಿಕ್ಸ್ ವಿಭಾಗದ ಅಧ್ಯಕ್ಷ ಪ್ರೊ.ನವೀನ್ ಕುಮಾರ್ ಎಸ್.ಕೆ. ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ.ಸಂಶೋಧನೆ ನಡೆಸುತ್ತಿದ್ದಾರೆ.
ಅಕ್ಷಯಕುಮಾರ್ ಅವರು ಯು.ಕೆ. ಸ್ಕಾಂಟ್ಲೆಂಡಿನ ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಉನ್ನತ ಸಂಶೋಧನೆ ನಡೆಸಲಿದ್ದಾರೆ. ಸ್ಮಾರ್ಟ್ ಕೃಷಿಗೆ ಅನುಕೂಲಕರವಾದ ಮಣ್ಣಿನ ಪಿ.ಎಚ್.ಮತ್ತು ನ್ಯಾಟ್ರಿಯಂಟ್ ನ್ನು ಪತ್ತೆಹಚ್ಚುವ ಸಂದೇಶ ವಾಹಕಗಳನ್ನು ನ್ಯಾನೋ ಮೆಟೀರಿಯಲ್ಸ್ ಬಳಸಿ ಅಭಿವೃದ್ದಿಪಡಿಸುವ ಗುರಿಹೊಂದಿದೆ.
ಎಲಿಯಾಣ ತಿಮ್ಮಪ್ಪ ಹಾಗೂ ಯಶೋಧ ದಂಪತಿಗಳ ಸುಪುತ್ರರಾದ ಇವರನ್ನು ಚಿನಾಲ ನವಯುವಕ ಕಲಾವೃಂದ ಗ್ರಂಥಾಲಯದ ಆಶ್ರಯದಲ್ಲಿ ಫೆಲೋಶಿಫ್ ಗೆ ಅರ್ಹತೆಪಡೆದು ವಿದೇಶಕ್ಕೆ ತೆರಳುತ್ತಿರುವ ಸಂದರ್ಭ ಭಾನುವಾರ ಅಭಿನಂದಿಸಲಾಯಿತು.
ಗ್ರಂಥಾಲಯದ ಅಧ್ಯಕ್ಷ ಯೋಗೀಶ ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಮಂಜೇಶ್ವರ ತಾಲೂಕು ಲೈಬ್ರರಿ ಕೌನ್ಸಿಲ್ ಅಧ್ಯಕ್ಷ ಅಬ್ದುಲ್ಲ ಕೆ. ಉದ್ಘಾಟಿಸಿದರು. ಜೊತೆ ಕಾರ್ಯದರ್ಶಿ ಶ್ರೀಕುಮಾರಿ ಟೀಚರ್ ಅಭಿನಂದನಾ ಭಾಷಣ ಮಾಡಿದರು. ಶಿಕ್ಷಕ ರಾಜಾರಾಮ ರಾವ್, ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ, ಮೀಂಜ ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಸರಸ್ವತಿ, ಗ್ರಾ.ಪಂ.ಸದಸ್ಯ ಜನಾರ್ದನ ಪೂಜಾರಿ, ಕ್ಲಬ್ ಅಧ್ಯಕ್ಷ ಮೋನಪ್ಪ ಪೂಜಾರಿ, ಮೀಂಜ ಗ್ರಾ.ಪಂ. ಗ್ರಂಥಾಲಯ ಸಮಿತಿ ಸಂಚಾಲಕ ರಾಮಚಂದ್ರ ಟಿ, ಬ್ಲಾಕ್ ಪಂಚಾಯತಿ ಮಾಜಿ ಸದಸ್ಯ ಪ್ರಭಾಕರ ಶೆಟ್ಟಿ, ಲೋಕೇಶ್ ಸಿ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು. ಗ್ರಂಥಾಲಯದ ಕಾರ್ಯದರ್ಶಿ ಸಂದೀಪ್ ಸ್ವಾಗತಿಸಿ, ಉದಯ ಸಿ.ಎಚ್.ವಂದಿಸಿದರು. ರವೀಂದ್ರ ಭಂಡಾರಿ ನಿರೂಪಿಸಿದರು.