ನವದೆಹಲಿ: ಪಟಾಕಿ ತಯಾರಿಕೆಯಲ್ಲಿ ವಿಷಕಾರಿ ರಾಸಾಯನಿಕಗಳ ಬಳಕೆ ಆಗುತ್ತಿರುವ ಕುರಿತು ಸಿಬಿಐ ಸಲ್ಲಿಸಿರುವ ವರದಿ ಅತ್ಯಂತ ಗಂಭೀರದ್ದಾಗಿದೆ ಎಂದಿರುವ ಸುಪ್ರೀಂ ಕೋರ್ಟ್, ಇದು ಮೇಲ್ನೋಟಕ್ಕೆ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗಿದೆ ಎಂದು ಹೇಳಿದೆ.
ಈ ಕುರಿತು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು, 'ಬೇರಿಯಂ' ಲವಣಗಳಂತಹ ಹಾನಿಕಾರಕ ರಾಸಾಯನಿಕಗಳು ಸಿಬಿಐ ವಶಪಡಿಸಿಕೊಂಡಿರುವ ಪಟಾಕಿಗಳಲ್ಲಿ ಕಂಡು ಬಂದಿವೆ ಎಂದು ತಿಳಿಸಿತು.
'ಹಿಂದೂಸ್ತಾನ್ ಫೈರ್‌ವರ್ಕ್ಸ್' ಮತ್ತು 'ಸ್ಟ್ಯಾಂಡರ್ಡ್ ಫೈರ್‌ವರ್ಕ್ಸ್' ತಯಾರಕರು ಭಾರಿ ಪ್ರಮಾಣದಲ್ಲಿ 'ಬೇರಿಯಂ' ಖರೀದಿಸಿರುವುದು ಮತ್ತು ಈ ರಾಸಾಯನಿಕಗಳನ್ನು ಪಟಾಕಿಗಳಲ್ಲಿ ಬಳಸಿರುವುದು ಗಮನಕ್ಕೆ ಬಂದಿದೆ ಎಂದು ಪೀಠ ತಿಳಿಸಿತು.
ಸಿಬಿಐನ ಚೆನ್ನೈ ಜಂಟಿ ನಿರ್ದೇಶಕರು ಸಲ್ಲಿಸಿರುವ ಪ್ರಾಥಮಿಕ ವಿಚಾರಣಾ ವರದಿಯನ್ನು ಪ್ರತಿವಾದಿಗಳ ಎಲ್ಲ ವಕೀಲರಿಗೆ ನೀಡುವಂತೆ ಸೂಚಿಸಿದ ನ್ಯಾಯಪೀಠವು, ಪಟಾಕಿ ತಯಾರಕರಿಗೆ ವಾದ ಮಂಡಿಸಲು ಇನ್ನೊಂದು ಅವಕಾಶ ನೀಡುವುದಾಗಿ ಹೇಳಿತು.
ದೇಶದಲ್ಲಿ ಪ್ರತಿದಿನ ಒಂದಲ್ಲ ಒಂದು ಆಚರಣೆಗಳಿರುತ್ತವೆ. ಈ ಸಂದರ್ಭದಲ್ಲಿ ಜನರ ಸಾವು ನೋವಿಗೆ ಅವಕಾಶ ಕಲ್ಪಿಸಬಾರದು ಎಂದ ಪೀಠವು, ಮುಂದಿನ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ನಿಗದಿಪಡಿಸಿತು.