ನವದೆಹಲಿ: ದೇಗುಲಕ್ಕೆ ಸಂಬಂಧಿಸಿ ಕಳೆದ 25 ವರ್ಷಗಳ ಲೆಕ್ಕಪರಿಶೋಧನೆ ನಡೆಸುವುದರಿಂದ ವಿನಾಯಿತಿ ನೀಡಬೇಕು ಎಂಬ ತಿರುವನಂತಪುರದ ಪದ್ಮನಾಭಸ್ವಾಮಿ ದೇವಸ್ಥಾನದ ಮನವಿಯನ್ನು ಸುಪ್ರೀಂಕೋರ್ಟ್ ಬುಧವಾರ ತಿರಸ್ಕರಿಸಿತು.
'ಲೆಕ್ಕಪರಿಶೋಧನೆ ಕಾರ್ಯವನ್ನು ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು' ಎಂದು ಸುಪ್ರೀಂಕೋರ್ಟ್ ಸೂಚಿಸಿತು.
ದೇವಸ್ಥಾನದ ಆಡಳಿತ ಸಮಿತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಯು.ಯು.ಲಲಿತ್, ಎಸ್.ರವೀಂದ್ರ ಭಟ್ ಹಾಗೂ ಬೇಲಾ ಎಂ.ತ್ರಿವೇದಿ ಅವರಿರುವ ನ್ಯಾಯಪೀಠ ನಡೆಸಿತು.
'ಲೆಕ್ಕಪರಿಶೋಧನೆ ಕೇವಲ ದೇವಸ್ಥಾನಕ್ಕೆ ಸಂಬಂಧಿಸಿದ್ದಲ್ಲ. ದೇವಸ್ಥಾನದ ಆಡಳಿತಕ್ಕೆ ಸಂಬಂಧಿಸಿದ ಟ್ರಸ್ಟ್‌ಗೂ ಇದು ಸಂಬಂಧಿಸಿದ್ದು. 2015ರಲ್ಲಿ ಅಮಿಕಸ್ ಕ್ಯೂರಿ ಅವರು ಸಲ್ಲಿಸಿದ್ದ ವರದಿಯ ಆಧಾರದ ಮೇಲೆ ಲೆಕ್ಕಪರಿಶೋಧನೆ ನಡೆಸಲು ಆದೇಶಿಸಲಾಗಿದೆ' ಎಂದು ನ್ಯಾಯಪೀಠ ಹೇಳಿತು.
ಕೋವಿಡ್ ಪಿಡುಗು ಹಾಗೂ ಲಾಕ್‌ಡೌನ್‌ನಿಂದಾಗಿ ದೇವಸ್ಥಾನದ ಆದಾಯ ಕುಸಿದಿದೆ. ದೇವಸ್ಥಾನ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದರಿಂದ ನಿತ್ಯದ ವೆಚ್ಚ ಸರಿದೂಗಿಸಲು ಸಹ ಆಗುತ್ತಿಲ್ಲ ಎಂದು ದೇವಸ್ಥಾನ ಆಡಳಿತ ಸಮಿತಿ ಸೆ.17ರಂದು ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು.
ಈ ಕಾರಣಕ್ಕೆ, ತಿರುವಾಂಕೂರು ರಾಜ ಮನೆತನ ಮುನ್ನಡೆಸುತ್ತಿರುವ ದೇವಸ್ಥಾನಕ್ಕೆ ಸಂಬಂಧಿಸಿದ ಟ್ರಸ್ಟ್‌ನ ಲೆಕ್ಕಪರಿಶೋಧನೆ ನಡೆಸಲು ಸೂಚಿಸುವಂತೆಯೂ ಕೋರಿತ್ತು.