ಲಕ್ನೋ: ಇತ್ತೀಚೆಗೆ ಸೈಬರ್ ಅಪರಾಧಗಳು ವ್ಯಾಪಕವಾಗಿ ಹೆಚ್ಚಳವಾಗುತ್ತಿದೆ. ಅದರಲ್ಲೂ ಆನ್‌ಲೈನ್ ಖದೀಮರಿಂದ ಅನೇಕ ಜನ ಹಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕಾಗಿ ಕಳ್ಳರು, ಗ್ರಾಹಕರ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಫ್ಯಾನ್ ಕಾರ್ಡ್ ಡೇಟಾಗಳನ್ನು ಕದ್ದು ದುರ್ಬಳಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಕಲಿ ಬೆರಳಚ್ಚು ಸೃಷ್ಟಿಸಿ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗುತ್ತಿದೆ.
ಹೌದು, ಬೆರಳಚ್ಚು ತದ್ರೂಪ ಸೃಷ್ಟಿಸಿ (Fingerprint Cloning) ಬ್ಯಾಂಕ್‌ನಿಂದ ಹಣ ದೋಚುತ್ತಿದ್ದ ಖದೀಮರ ಗುಂಪನ್ನು ಉತ್ತರ ಪ್ರದೇಶದ ಲಕ್ನೋ ಪೊಲೀಸರು ಬಂಧಿಸಿದ್ದಾರೆ.
ಗೋಮತಿ ನಗರ ಪೊಲೀಸ್ ಠಾಣೆ ಪೊಲೀಸರು, ಈ ರೀತಿ ಅಪರಾಧ ಕೃತ್ಯಗಳಲ್ಲಿ ನಿರತಾಗಿದ್ದ ಮೂವರನ್ನು ಗುರುವಾರ ಬಂಧಿಸಿ ಅವರಿಂದ ₹2.98 ಲಕ್ಷ ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಗೋರಖ್‌ಪುರದ ರಾಜೇಶ್ ರೈ, ರಾಹುಲ್ ಕುಮಾರ್ ರೈ, ರಾಮ್ ಶರಣ್ ಗೌರ್ ಎಂದು ಗುರುತಿಸಲಾಗಿದೆ.
'ಇವರು ಬ್ಯಾಂಕ್ ಸಿಬ್ಬಂದಿ ತರ ವೇಷ ಹಾಕಿಕೊಂಡು ಕೆವೈಸಿ ಪೂರ್ಣ ಮಾಡಬೇಕೆಂದು ಗ್ರಾಹಕರಿಂದ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು. ನಂತರ ಆಧಾರ್ ಕಾರ್ಡ್ ಮೂಲಕ ಬೆರಳಚ್ಚು ಪಡೆದುಕೊಂಡು, ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣ ಪಡೆಯಲು ಅದನ್ನು ಬಳಸುತ್ತಿದ್ದರು. ಈ ಕುರಿತು ತನಿಖೆ ಪ್ರಗತಿಯಲ್ಲಿದೆ' ಎಂದು ಲಕ್ನೋ ಹೆಚ್ಚುವರಿ ಡಿಸಿಪಿ ಖಾಶಿಮ್ ಅಬಿದಿ ತಿಳಿಸಿದ್ದಾರೆ.