HEALTH TIPS

ವೆಂಟಿಲೇಟರ್‌ ಬಳಕೆ: ಕೇಂದ್ರದಲ್ಲಿ ಮಾಹಿತಿಯೇ ಇಲ್ಲ

                ಮುಂಬೈ: ಕೋವಿಡ್‌-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ವೆಂಟಿಲೇಟರ್‌ಗಳಲ್ಲಿ ಸಂಭವಿಸಿದ ಸಾವುಗಳು ಮತ್ತು ವೆಂಟಿಲೇಟರ್‌ ಬಳಕೆ ಕುರಿತಾದ ಮಾಹಿತಿಗಳು ಕೇಂದ್ರ ಗೃಹ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳ ಬಳಿ ಇಲ್ಲ ಎಂದು ನ್ಯಾಟ್‌ಕನೆಕ್ಟ್‌ ಫೌಂಡೇಷನ್‌ ಎಂಬ ಎನ್‌ಜಿಒ ಹೇಳಿದೆ.

          ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಅಡಿ ಈ ಎನ್‌ಜಿಒ ಸಲ್ಲಿಸಿದ್ದ ಅರ್ಜಿಗೆ ಉತ್ತರಿಸಿರುವ ಸಚಿವಾಲಯ ತನ್ನ ಬಳಿ ಮಾಹಿತಿ ಇಲ್ಲ ಎಂದು ಹೇಳಿದೆ.

          ಕೋವಿಡ್‌ -19 ಸಾಂಕ್ರಾಮಿಕದ ಎರಡೂ ಅಲೆಗಳ ಸಂದರ್ಭದಲ್ಲಿ ವೆಂಟಿಲೇಟರ್‌ಗಳಲ್ಲಿ ಇರಿಸಿ ಚಿಕಿತ್ಸೆ ನೀಡಿದ ರೋಗಿಗಳ ಕುರಿತು ಎನ್‌ಜಿಒ ಮಾಹಿತಿ ಕೇಳಿತ್ತು. ಇದಕ್ಕೆ ಉತ್ತರಿಸಿದ್ದ ಸಚಿವಾಲಯ, ಕೇಂದ್ರ ಗೃಹ ಮತ್ತು ಕುಟುಂಬ ಕಲ್ಯಾಣ ಇಲಾಖೆಗಳಲ್ಲಿ ಈ ಕುರಿತ ಮಾಹಿತಿ ಇಲ್ಲ ಎಂದು ಹೇಳಿದೆ.

ಈ ಪ್ರತಿಕ್ರಿಯೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿರುವ ನೆಟ್‌ಕನೆಕ್ಟ್‌ ನಿರ್ದೇಶಕ ಬಿ.ಎನ್‌. ಕುಮಾರ್‌, 'ಸಚಿವಾಲಯದ ಬಳಿಯೇ ಈ ಕುರಿತು ಮಾಹಿತಿ ಲಭ್ಯ ಇಲ್ಲದಿದ್ದರೆ ಬೇರೆ ಯಾರ ಬಳಿ ಇರುತ್ತದೆ. ಮೊದಲನೆಯದಾಗಿ, ಪ್ರತಿಕ್ರಿಯೆ ನೀಡಲು ಮೂರು ತಿಂಗಳ ಸುದೀರ್ಘ ಸಮಯಾವಕಾಶವನ್ನು ಸಚಿವಾಲಯ ತೆಗೆದುಕೊಂಡಿತು. ಜೊತೆಗೆ, ಪ್ರತಿಕ್ರಿಯೆ ಕೂಡ ತೃಪ್ತಿದಾಯಕವಲ್ಲ' ಎಂದಿದ್ದಾರೆ.

               ನಿರಂತರವಾಗಿ ಬಾಧಿಸುತ್ತಿರುವ ಕೋವಿಡ್‌ ಸಾಂಕ್ರಾಮಿಕದ ಕುರಿತು ಯಾವೆಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಸೇವಾ ವಲಯ ತೆಗೆದುಕೊಂಡಿದೆ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವೆಂಟಿಲೇಟರ್‌ ಚಿಕಿತ್ಸೆ ಎಷ್ಟು ಫಲಪ್ರದವಾಗಿದೆ ಎಂದು ತಿಳಿಯುವುದಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ವೆಂಟಿಲೇಟರ್ ಮತ್ತು ಆಮ್ಲಜನಕದ ಕೊರತೆಯಿಂದ ಕೋವಿಡ್‌-19 ರೋಗಿಗಳಲ್ಲಿ ಹಲವರು ಮೃತಪಟ್ಟ ಹಿನ್ನೆಲೆಯಲ್ಲಿ ಈ ಮಾಹಿತಿಗಳನ್ನು ಪಡೆಯುವುದು ಮಹತ್ವ ಪಡೆದಿದೆ ಎಂದು ಅವರು ಹೇಳಿದರು. ಅಲ್ಲದೇ, ಹೈದರಾಬಾದ್‌ನ ಆಸ್ಪತ್ರೆಯೊಂದರಲ್ಲಿ ಗಾಲಿಕುರ್ಚಿಯ ಮೇಲೆಯೇ ಪ್ರಾಣ ಬಿಟ್ಟ ಪತ್ರಕರ್ತನನ್ನು ಅವರು ನೆನಪು ಮಾಡಿಕೊಂಡರು.

             ಈಗಲಾದರೂ ಕೇಂದ್ರ ಸಚಿವಾಲಯ ವೆಂಟಿಲೇಟರ್‌ಗಳಲ್ಲಿ ನಡೆದ ಸಾವಿನ ಕುರಿತು ಅಗತ್ಯ ಮಾಹಿತಿ ಕಲೆಹಾಕುತ್ತದೆ ಮತ್ತು ಮೂರನೇ ಅಲೆ ವಿರುದ್ಧ ಹೋರಾಡಲು ಅಗತ್ಯ ತಯಾರಿ ಮಾಡಿಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

          2020ರ ಏಪ್ರಿಲ್‌-ಡಿಸೆಂಬರ್‌ನಲ್ಲಿ ಕೋವಿಡ್‌ಗೆ ಒಳಗಾದ ಶೇ 25ರಷ್ಟು ರೋಗಿಗಳು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ. 2021ರ ಜನವರಿಯಿಂದ ಏಪ್ರಿಲ್‌ನಲ್ಲಿ ಶೇ 28ರಷ್ಟು ರೋಗಿಗಳು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆದು ಬದುಕುಳಿದಿದ್ದಾರೆ ಎಂದು ಭೋಪಾಲ್‌ನ ಏಮ್ಸ್‌ ತಿಳಿಸಿದೆ. ಮೊದಲನೇ ಅಲೆಯಲ್ಲಿ ಶೇ 42ರಷ್ಟು ರೋಗಿಗಳು ಮತ್ತು ಎರಡನೇ ಅಲೆಯಲ್ಲಿ ಶೇ 21ರಷ್ಟು ರೋಗಿಗಳು ವೆಂಟಿಲೇಟರ್‌ನಲ್ಲಿ ಬದುಕುಳಿದಿದ್ದಾರೆ ಎಂದು ಭುವನೇಶ್ವರದ ಏಮ್ಸ್‌ ಹೇಳಿದೆ. ನ್ಯಾಟ್‌ಕನೆಕ್ಟ್‌ ಕೇಳಿದ್ದ ಪ್ರಶ್ನೆಯನ್ನು ಕೇಂದ್ರ ಸಚಿವಾಲಯ ಈ ಆಸ್ಪತ್ರೆಗಳಿಗೆ ವರ್ಗಾಯಿಸಿದ ಬಳಿಕ ಈ ಪ್ರತಿಕ್ರಿಯೆಗಳು ದೊರೆತಿವೆ ಎನ್ನಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries