ನವದೆಹಲಿ: ಕೇಂದ್ರ ಜಲಶಕ್ತಿ ಸಚಿವಾಲಯವು ಟ್ವಿಟರ್‌ನಲ್ಲಿ ನೀರಿನ ಸಂರಕ್ಷಣೆಯ ಮಹತ್ವವನ್ನು ಸಾರುವ ವಿಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಆನೆಯು ಕೈಪಂಪ್ ಒತ್ತುವ ಮೂಲಕ ನೀರನ್ನು ಸಂಗ್ರಹಿಸಿ ದಾಹ ತಣಿಸಿಕೊಳ್ಳುವ ದೃಶ್ಯವಿದೆ.
ದಾಹವಾಗಿದ್ದ ಆನೆಗೆ ಬಹುಶಃ ಕೆರೆ, ಕಟ್ಟೆಗಳಂತಹ ನೈಸರ್ಗಿಕ ಜಲಮೂಲಗಳಿಂದ ನೀರು ಸಿಕ್ಕಿಲ್ಲ. ಹಾಗಾಗಿ, ಅನಿವಾರ್ಯವಾಗಿ ಹ್ಯಾಂಡ್ ಪಂಪ್ ಬಳಸಿ ಅಂತರ್ಜಲವನ್ನು ಪಡೆಯುವ ಯತ್ನ ನಡೆಸಿದೆ.
ಆ ಹೋರಾಟವು ಆನೆಗೆ ಪ್ರತಿ ಹನಿಯ ನೀರಿನ ಪ್ರಾಮುಖ್ಯತೆಯ ಅರಿವು ಮೂಡಿಸಿದೆ. ಹಾಗಾಗಿ, ತನ್ನ ಬಾಯಾರಿಕೆ ನೀಗಲು ಸಾಕಾಗುವಷ್ಟು ನೀರನ್ನು ಮಾತ್ರ ಪಂಪ್ ಮಾಡಿದೆ. ತನ್ನ ಸೊಂಡಿಲ ಮೂಲಕ ನೀರನ್ನು ಸಂಗ್ರಹಿಸಿ ಕುಡಿದು ದಾಹ ತಣಿಸಿಕೊಂಡಿದೆ.
ನೀರನ್ನು ಸಂರಕ್ಷಿಸಿ ಇಲ್ಲವೆ ನೈಸರ್ಗಿಕ ನೀರಿನ ಮೂಲವನ್ನು ಹುಡುಕಲು ಹೆಣಗಾಡಲು ಸಿದ್ಧರಾಗಿರಿ ಎಂಬುದು ಸಚಿವಾಲಯದ ಸಂದೇಶವಾಗಿದೆ.
ಆನೆಯು ಅಗತ್ಯಕ್ಕಿಂತ ಹೆಚ್ಚಿನ ನೀರನ್ನು ಪಂಪ್ ಮಾಡಲಿಲ್ಲ, ಇದರರ್ಥ, ನೀರನ್ನು ವ್ಯರ್ಥ ಮಾಡಬಾರದು ಎಂಬುದಾಗಿದೆ. ಅನಗತ್ಯವಾಗಿ ನಲ್ಲಿಗಳನ್ನು ಆನ್ ಮಾಡಿಟ್ಟು ನೀರು ಪೋಲು ಮಾಡುವ ಜನರಿಗೆ ಇದು ಪಾಠವಾಗಿದೆ.
'ಆನೆಯೂ ಕೂಡ ಪ್ರತಿ ಹನಿ ನೀರಿನ ಮಹತ್ವವನ್ನು ಅರ್ಥಮಾಡಿಕೊಂಡಿದೆ. ಹಾಗಾದರೆ, ಮಾನವರಾದ ನಾವು ಈ ಅಮೂಲ್ಯವಾದ ಸಂಪನ್ಮೂಲವನ್ನು ಏಕೆ ವ್ಯರ್ಥ ಮಾಡುತ್ತೇವೆ'ಎಂದು ಸಚಿವಾಲಯವು ಹಿಂದಿಯಲ್ಲಿ ಟ್ವೀಟ್ ಮಾಡಿದೆ. ಜನರು ಆನೆಯ ಕಾಳಜಿಯನ್ನು ಅರ್ಥ ಮಾಡಿಕೊಂಡು ನೀರನ್ನು ಸಂರಕ್ಷಿಸಲು ಪ್ರಾರಂಭಿಸುವಂತೆ ಅದು ಒತ್ತಾಯಿಸಿದೆ.
ಸಚಿವಾಲಯದ ಈ ಪೋಸ್ಟ್ ಇದುವರೆಗೆ 17,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.