ನವದೆಹಲಿ : ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷದ ಮೇಲೆ ಮುನಿಸಿಕೊಂಡಿದ್ದ ಹಿರಿಯ ನಾಯಕ ಅಮರಿಂದರ್ ಸಿಂಗ್ ಬುಧವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಒಂದು ಗಂಟೆಯ ಕಾಲ ಮಾತುಕತೆ ನಡೆಸಿದರು.
ನಾನು ಗೃಹ ಸಚಿವರೊಂದಿಗೆ ಪಂಜಾಬ್ ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ ಎಂದು ಸಿಂಗ್ ಟ್ವೀಟ್ ಮಾಡಿದರು.
#NoFarmersNoFood ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಿದ ಸಿಂಗ್, "ದಿಲ್ಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜಿ ಅವರನ್ನು ಭೇಟಿ ಮಾಡಿದೆ. ಕೃಷಿ ಕಾನೂನುಗಳ ವಿರುದ್ಧ ದೀರ್ಘಕಾಲದ ರೈತರ ಆಂದೋಲನವನ್ನು ಚರ್ಚಿಸಿದೆ ಹಾಗೂ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದರೊಂದಿಗೆ ಬಿಕ್ಕಟ್ಟನ್ನು ತುರ್ತಾಗಿ ಪರಿಹರಿಸುವಂತೆ ಹಾಗೂ ಕನಿಷ್ಠ ಬೆಂಬಲ ಬೆಲೆ( ಎಂಎಸ್‌ಪಿ)ಯನ್ನು ಖಾತರಿಪಡಿಸುವ ಜೊತೆಗೆ ಬೆಳೆ ವೈವಿಧ್ಯೀಕರಣಕ್ಕೆ ಪಂಜಾಬ್ ಅನ್ನು ಬೆಂಬಲಿಸುವಂತೆ ಕೋರಿದೆ'' ಎಂದು ಟ್ವೀಟಿಸಿದರು.