ಪಾಲಕ್ಕಾಡ್ : ಸಾಧಿಸುವ ಹಂಬಲದೊಂದಿಗೆ ಓದಿನಲ್ಲಿ ಮುಂಚೂಣಿಯಲ್ಲಿದ್ದ ಸಂಶೋಧನಾ ವಿದ್ಯಾರ್ಥಿನಿ ತನ್ನೆಲ್ಲ ಗುರಿಗಳನ್ನು ಬಿಟ್ಟು ಇದೀಗ ಸಾವಿನ ಹಾದಿ ಹಿಡಿದಿರುವುದು ಕೇರಳದ ಕೊಳ್ಳೆಂಗೋಡಿನ ಪಯ್ಯಲ್ಲೂರು ಮೊಕ್ಕುದಲ್ಲಿರುವ ಕುಟುಂಬವನ್ನು ಆಘಾತಕ್ಕೆ ದೂಡಿದೆ.
ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯನ್ನು ಕೃಷ್ಣಕುಮಾರಿ ಎಂದು ಗುರುತಿಸಲಾಗಿದೆ. ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ತಂದೆ ಕೃಷ್ಣಕುಟ್ಟಿ ಯೋಧರಾಗಿದ್ದು, ಕೃಷ್ಣಕುಮಾರಿಗೆ ಮೂವರು ಸಹೋದರಿಯರಿದ್ದಾರೆ. ಎಲ್ಲರೂ ಕೂಡ ಗುಜರಾತ್ ಮತ್ತು ಇತರೆ ಉತ್ತರ ಭಾರತದ ರಾಜ್ಯಗಳಲ್ಲಿ ತಮ್ಮ ವಿದ್ಯಾಭ್ಯಾಸಗಳನ್ನು ಪೂರ್ಣಗೊಳಿಸಿದ್ದಾರೆ.
ದೇಶ ಸೇವೆಯ ಜತೆಗೆ ಕೃಷ್ಣಕುಟ್ಟಿ ದಂಪತಿಗೆ ತಮ್ಮ ನಾಲ್ಕು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಆಲೋಚನೆ ಇತ್ತು. ಅದರಲ್ಲಿ ಇಬ್ಬರು ಪುತ್ರಿಯರು ಸಹಾಯಕ ಪ್ರಾಧ್ಯಾಪಕರಾಗಿ ತಮ್ಮ ವೃತ್ತಿಜೀವನವನ್ನು ಆರಿಸಿಕೊಂಡಾಗ ಕುಟುಂಬಕ್ಕೆ ಬಹಳ ಖುಷಿಯಾಗಿತ್ತು. ಇನ್ನೊಬ್ಬ ಮಗಳು ಸ್ನಾತಕೋತ್ತರ ಪದವಿಯನ್ನು ಮುಗಿಸಿದ ನಂತರ ಸಂಶೋಧನೆಗೆ ಸೇರಿದರು.
ಗುಜರಾತಿನ ಬರೋಡಾದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಿಂದ ಕೃಷ್ಣಕುಮಾರಿ ತನ್ನ ಬಿ.ಟೆಕ್ ಮತ್ತು ಎಂಟೆಕ್ ಅನ್ನು ಹೆಚ್ಚಿನ ಅಂಕಗಳೊಂದಿಗೆ ಪೂರ್ಣಗೊಳಿಸಿದರು. ತಮ್ಮ ಗಮನಾರ್ಹ ಸಾಧನೆಗೆ ಸ್ಫೂರ್ತಿ ಪ್ರಶಸ್ತಿ, ಫೆಲೋಶಿಪ್ ಮತ್ತು ಚಿನ್ನದ ಪದಕವನ್ನು ಪಡೆದಿದ್ದಳು. 2020ರಲ್ಲಿ ಭಾರತದ ವಿಜ್ಞಾನ ಸಚಿವಾಲಯವು ಸ್ಥಾಪಿಸಿದ ಅತ್ಯುತ್ತಮ ವಿಜ್ಞಾನ ಪತ್ರಿಕೆಗಾಗಿ ಕೃಷ್ಣಕುಮಾರಿ ಅವ್ಸರ್ ಪ್ರಶಸ್ತಿಯನ್ನು ಸಹ ಪಡೆದಿದ್ದರು.
ಇಷ್ಟೆಲ್ಲ ಸಾಧನೆ ಮಾಡಿ ಇನ್ನು ಸಾಧಿಸುವ ಹಂಬಲದೊಂದಿಗೆ ಅನೇಕ ಗುರಿಗಳನ್ನು ಇಟ್ಟುಕೊಂಡಿದ್ದ ಕೃಷ್ಣ ಕುಮಾರಿ ತಮ್ಮ ಕಾಲೇಜಿನಲ್ಲಿ ಪಿಎಚ್ಡಿ ಸಂಶೋಧನಾ ಮಾರ್ಗದರ್ಶಕರು ಹಾಗೂ ತನ್ನ ಸುತ್ತಮುತ್ತಲಿನ ಜನರು ಹುರಿದುಂಬಿಸುತ್ತಿಲ್ಲ ಮತ್ತು ಅಸಡ್ಡೆ ಭಾವನೆ ಹೊಂದಿದ್ದಾರೆಂಬ ನೋವಿನಿಂದ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾರೆ.
ಕೊಯಮತ್ತೂರಿನ ಕಾಲೇಜಿನಲ್ಲಿ ಕೃಷ್ಣಕುಮಾರಿ ಎದುರಿಸಿದ ಮಾನಸಿಕ ಕಿರುಕುಳದ ಬಗ್ಗೆ ತಮಿಳುನಾಡು ಶಿಕ್ಷಣ ಸಚಿವರ ಗಮನ ಸೆಳೆಯುವುದಾಗಿ ಕೇರಳ ಶಾಸಕ ಕೆ. ಬಾಬು ಹೇಳಿದ್ದಾರೆ.