ಕಾಸರಗೋಡು: ಆದರ್ಶ ಶಿಕ್ಷಕ, ಶ್ರೇಷ್ಠ ತತ್ವಜ್ಞಾನಿ ಎಸ್. ರಾಧಾಕೃಷ್ಣನ್ ಅವರ ಆದರ್ಶಪಾಲನೆ ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಬೇಕು ಎಂದು ಕೇಂದ್ರ ವಿದೇಶಾಂಗ-ಸಂಸದೀಯ ವ್ಯವಹಾರ ಖಾತೆ ಸಹಾಯಕ ಸಚಿವ ವಿ.ಮುರಳೀಧರನ್ ತಿಳಿಸಿದ್ದಾರೆ.
ಅವರು ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ನಲ್ಲಿ ಶಿಕ್ಷಕರ ದಿನಾಚರಣೆ ಹಾಗೂ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದರು. ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯ ಶೈಕ್ಷಣಿಕ ವಿಭಾಗ ಹಾಗೂ ಎನ್ನೆಸ್ಸೆಸ್ ಘಟಕ ಜಂಟಿ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು. ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ವಿಶ್ವಕ್ಕೆ ಮಾದರಿಯಾಗಿದೆ. ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ'ಆಜಾದಿ ಕಾ ಅಮೃತ್ ಮಹೋತ್ಸವ್'ಕಾರ್ಯಕ್ರಮಕ್ಕೆ ದೇಶಾದ್ಯಂತ ಚಾಲನೆ ನೀಡಲಾಗಿದ್ದು, ಈ ಮೂಲಕ ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಬಲಿದಾನದ ಚಿತ್ರಣವನ್ನು ಮುಂದಿನ ತಲೆಮಾರಿಗೆ ತಲುಪಿಸುವ ಕಾರ್ಯ ನಡೆಯಲಿದೆ. ದೇಶವನ್ನು ಪುರೋಗತಿಯತ್ತ ಕೊಂಡೊಯ್ಯುವಲ್ಲಿ ಉನ್ನತ ಶಿಕ್ಷಣದ ಪಾತ್ರ ಮಹತ್ತರವಾಗಿರುವುದಗಿ ತಿಳಿಸಿದರು.
ಈ ಸಂದರ್ಭ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ, ಸಂಶೋಧಕ ಪ್ರೊ. ಪ್ರತಾಪಚಂದ್ರ ಕುರುಪ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ, ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆ ನಡೆಯಿತು. ವಿಶ್ವ ವಇದ್ಯಾಲಯ ಉಪಕುಲಪತಿ ಪ್ರೊ. ವೆಂಕಟೇಶ್ವರಲು ಸ್ವಾಗತಿಸಿದರು. ಪ್ರಭಾರ ರಿಜಿಸ್ಟ್ರಾರ್ ಡಾ. ರಾಜೇಂದ್ರ ಪಿಲಾಂಕಟ್ಟೆ ವಂದಿಸಿದರು.