ನವದೆಹಲಿ: ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನದ ಚರ್ಚೆ ಮತ್ತೆ ಶುರುವಾಗಿದ್ದು, ಚುನಾಯಿತ ಅಧ್ಯಕ್ಷರಿಲ್ಲದ ಕಾರಣ ಪಕ್ಷದಲ್ಲಿ ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಪ್ರಶ್ನಿಸಿದ್ದಾರೆ. ಅಲ್ಲದೆ "ಜಿ -23" ನಾಯಕರು "ಜಿ ಹುಜೂರ್ ಗಳಲ್ಲ' ಎಂದಿದ್ದಾರೆ.
ಕಾಂಗ್ರೆಸ್ ಕಾರ್ಯಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಸ್ಪಷ್ಟ ವಾಗ್ದಾಳಿ ನಡೆಸಿರುವ ಸಿಬಲ್, ಪಂಜಾಬ್‌ನಲ್ಲಿ ಪಕ್ಷದ ಬಿಕ್ಕಟ್ಟಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು ಮತ್ತು ಇಂತಹ ಸಮಸ್ಯೆಗಳು ಪಕ್ಷದ ಸಭೆಯಲ್ಲಿ ಚರ್ಚಿತವಾಗಬೇಕೇ ಹೊರತು, ಸಾರ್ವಜನಿಕ ವೇದಿಕೆಯಲ್ಲಿ ಅಲ್ಲ ಎಂದಿದ್ದಾರೆ.
'ನಮ್ಮ ಪಕ್ಷದಲ್ಲಿ ಅಧ್ಯಕ್ಷರೇ ಇಲ್ಲ, ಹಾಗಾಗಿ ಈ ಎಲ್ಲ ನಿರ್ಧಾರಗಳನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ ಎಂದು ತಿಳಿದಿಲ್ಲ. ನಮಗೆ ಅದು ತಿಳಿದಿರುವುದಾದರೂ, ತಿಳಿಯದಂತಾಗಿದೆ' ಎಂದು ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ನಾವು(ಜಿ-23ರ ಮುಖಂಡರು) ಪಕ್ಷ ತೊರೆದು, ಬೇರೆ ಎಲ್ಲಿಗೋ ಹೋಗುವವರಲ್ಲ. ಯಾರು ಪಕ್ಷದ ನಾಯಕತ್ವಕ್ಕೆ ಹತ್ತಿರದಲ್ಲಿದ್ದರೋ ಅವರು ಪಕ್ಷ ತೊರೆದರು, ವಿಪರ್ಯಾಸವೆಂದರೆ ಯಾರನ್ನು ಅವರು(ಪಕ್ಷದ ನಾಯಕತ್ವ) ಹತ್ತಿರದವರು ಎಂದು ಭಾವಿಸಲಿಲ್ಲವೋ ಅವರಿನ್ನೂ ಜೊತೆಗೆ ನಿಂತಿದ್ದಾರೆ ಎಂದು ಪಕ್ಷದೊಳಗಿನ ಸ್ಥಿತಿಯನ್ನು ಕಪಿಲ್ ಸಿಬಲ್ ಹೊರಹಾಕಿದ್ದಾರೆ.
ಇತ್ತೀಚೆಗೆ ಪಕ್ಷವನ್ನು ತೊರೆದು ಹೋದವರು ಎಲ್ಲರೂ ಮರಳಿ ಪಕ್ಷಕ್ಕೆ ಬರಬೇಕು. ಕಾಂಗ್ರೆಸ್ ಮಾತ್ರವೇ ದೇಶವನ್ನು ಉಳಿಸಬಹುದು ಎಂದು ಕಾಂಗ್ರೆಸ್ ಹಿರಿಯ ನಾಯಕ ಕಪಿಲ್ ಸಿಬಲ್ ಮನವಿ ಮಾಡಿದ್ದಾರೆ.